ಜೀವರಾಜ್ ರಾಜಿನಾಮೆ ಆಗ್ರಹಿಸಿ ರಸ್ತೆ ತಡೆ
ಕ.ಪ್ರ.ವಾರ್ತೆ ಟಿ ಶೃಂಗೇರಿ ಟಿ ನ.18
ಅತ್ಯಾಚಾರ ಆರೋಪ ಎದುರಿಸುತ್ತಿರುವ ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ರಾಜಿನಾಮೆಗೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಭಾರತಿ ಬೀದಿಯಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಜೀವರಾಜ್ ವಿರುದ್ಧ ಘೋಷಣೆ ಕೂಗಿ ರಾಜಿನಾಮೆಗೆ ಒತ್ತಾಯಿಸಿದರು. ಇತರೆ ವ್ಯಕ್ತಿಗಳಂತೆ ಜೀವರಾಜ್ ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೆಲಹೊತ್ತು ರಸ್ತೆ ತಡೆ ನಡೆಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯ ಗೋಪಾಲನ್ ಮಾತನಾಡಿ, ಜನಪ್ರತಿನಿಧಿಯಾಗಿ ಮಹಿಳೆಯ ಮೇಲೆ ದೌರ್ಜನ್ಯ, ಅತ್ಯಾಚಾರ ಆರೋಪ ಎದುರಿಸುತ್ತಿರುವ ಶಾಸಕರ ಈ ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಇಂತಹ ಆರೋಪ ಎದುರಿಸಿ ಕ್ಷೇತ್ರಕ್ಕೆ ಕಳಂಕ ತಂದಿದ್ದಾರೆ. ಕೂಡಲೇ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಎಂ.ಎಚ್. ನಟರಾಜ್, ಕೆ.ಆರ್. ವೆಂಕಟೇಶ್, ಗೀತಾ ಶ್ರೀನಿವಾಸ ನಾಯಕ್, ಮಂಜುಳಾ ಜಯಮೂರ್ತಿ, ಕಲ್ಕುಳಿ ವೆಂಕಟೇಶ್, ಇ. ಮಹೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.