ರವಿಗೆ ಟಾಂಗ್ ಕೊಟ್ಟ ಖರ್ಗೆ, ಸಿದ್ದರಾಮಯ್ಯ
ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ನೂತನ ರೈಲು ಸಂಚಾರ ಆರಂಭ...,
ಇದರ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಹಲವು ದಿನಗಳಿಂದ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಲೇ ಬಂದವು. ಇದು, ಉದ್ಘಾಟನಾ ಸಮಾರಂಭದ ವೇದಿಕೆಯಲ್ಲೂ ವ್ಯಕ್ತವಾಯಿತು.
ಕಾರ್ಯಕ್ರಮದ ಮೊದಲಿಗೆ ಶಾಸಕ ಸಿ.ಟಿ. ರವಿ ಮಾತನಾಡಿ, ಈ ಯೋಜನೆ ಪೂರ್ಣಗೊಳ್ಳಲು ಎನ್‌ಡಿಎ ಹಾಗೂ ರಾಜ್ಯದ ಬಿಜೆಪಿ ಸರ್ಕಾರವೇ ಕಾರಣ ಎಂದು ತಮ್ಮ ಪಕ್ಷದ ನಾಯಕರ ಹೆಸರನ್ನು ಪ್ರಸ್ತಾಪ ಮಾಡಿದರು. ಹಾಗೆಯೇ ಅವರು ಮಾತು ಮುಂದುವರೆಸುತ್ತಿದ್ದಂತೆ ವೇದಿಕೆಯಲ್ಲಿ ಆಸಿನರಾಗಿದ್ದ ಕೇಂದ್ರದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಟೈಂ ಆಯ್ತು ಮಾತು ಸಾಕು ಬಂದು ಕುಳಿತುಕೊಳ್ಳಿ ಎಂದು ಕೈ ಸನ್ನೆ ಮಾಡಿದರೂ ಸಹ ರವಿ ಅವರು ಮಾತು ಮುಂದುವರೆಸಿ, ಚಿಕ್ಕಮಗಳೂರು ರೈಲು ಮಾರ್ಗವನ್ನು ಬೇರೆ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಬೇಕೆಂದು ಹಾಗೂ ಕೆಲವು ಬೇಡಿಕೆಗಳನ್ನು ಮುಂದಿಟ್ಟರು. ಬಳಿಕ ಖರ್ಗೆಯವರು ರೈಲು ಸಂಚಾರಕ್ಕೆ ಹಸಿರು ನಿನಾಶೆ ತೋರಿಸಿ ಮಾತನಾಡುತ್ತಿದ್ದಾಗ ಒಳ್ಳೆಯ ಕೆಲಸಕ್ಕೆ ಅಪಸ್ವರ ನುಡಿಯಬಾರದೆಂದು ವೇದಿಕೆಯತ್ತ ಮುಖ ಮಾಡಿ ಹೇಳುತ್ತಿರುವಾಗ ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತಿರುವುದನ್ನು ಕಂಡು, ಇಲ್ಲಿ ಕಿವಿಯಲ್ಲಿ ಮಾತಾಡ್ತೀಯಾ, ಅಲ್ಲಿಗೆ ಹೋಗಿ (ಮೈಕ್ ಕಡೆ ಕೈ ತೋರಿಸಿ) ಬೈಯಿತಾ ಎಂದು ಮೂದಲಿಸಿದರು.
ಪ್ರಸಕ್ತ ಸಾಲಿನಲ್ಲಿ ಕಾಲೇಜು ಆರಂಭವಿಸಬೇಕೆಂದು ಸಿ.ಟಿ. ರವಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡ ತಕ್ಷಣ ಕಾಲೇಜು ಮಂಜೂರಾಯಿತ್ತೆಂದು ಹೇಳುವುದಲ್ಲ, ಬಜೆಟ್‌ನಲ್ಲಿ ಕಾಲೇಜು ಮಂಜೂರು ಮಾಡಿ, ಅದಕ್ಕೆ ಹಣವನ್ನು ತೆಗೆದಿಡಬೇಕಾಗಿತ್ತು. ಆ ಕೆಲಸ ಹಿಂದಿನ ಸರ್ಕಾರದಲ್ಲಿ ಆಗಿಲ್ಲ.
ಜನತಾದಳ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಚಿಕ್ಕಮಗಳೂರಿನ ಕುರುಬರ ಸಂಘಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ, ನಂತರದಲ್ಲಿ ಈ ಬಗ್ಗೆ ಪ್ರಯತ್ನ ಆಗಲಿಲ್ಲ. ಮುಂದಿನ ದಿನಗಳಲ್ಲಿ ಚಿಕ್ಕಮಗಳೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳುವ ಮೂಲಕ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ ಹೇಳಿಕೆಗೆ ಸಿದ್ದು ಅವರು ಇತಿಶ್ರೀ ಹಾಡಿದರು.