ರೇಲ್ವೆ ಯೋಜನೆಗೆ ಭೂಮಿ ಬೇಕು: ಖರ್ಗೆ
ರಾಜ್ಯದಲ್ಲಿನ ರೇಲ್ವೆ ಯೋಜನೆಯನ್ನು ಪೂರ್ಣಗೊಳಿಸಲು ಭೂಮಿಯ ಅವಶ್ಯಕತೆ ಇದ್ದು, ಭೂ ಸ್ವಾಧೀನಪಡಿಸಿಕೊಳ್ಳಲು ಮುಖ್ಯಮಂತ್ರಿ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕೆಂದು ಕೇಂದ್ರದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಚಿಕ್ಕಮಗಳೂರಿನಲ್ಲಿ ನೂತನ ರೈಲಿಗೆ ಚಾಲನೆ ನೀಡಿ ಮಾತನಾಡಿ, ಭೂ ಸ್ವಾಧೀನ ವಿಳಂಬದಿಂದ ಕರ್ನಾಟಕದಲ್ಲಿ ರೇಲ್ವೆ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ ಎಂದರು. ಹರಿಹರ-ಕೊಟ್ಟೂರು, ತುಮಕೂರು-ದಾವಣಗೆರೆ ಸೇರಿದಂತೆ ಕೆಲವು ರೇಲ್ವೆ ಮಾರ್ಗಗಳ ನಿರ್ಮಾಣಕ್ಕೆ ಭೂಮಿಯ ಅವಶ್ಯಕತೆ ಇದೆ. ಅದುದರಿಂದ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದು ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೇಲ್ವೆ ಸಚಿವಾಲಯಕ್ಕೆ ಹಸ್ತಾಂತರಿಸ ಬೇಕೆಂದರು.
ದೇಶದಲ್ಲಿ ಪ್ರತಿ ದಿನ 2.20 ಕೋಟಿ ಜನರು ರೈಲಿನಲ್ಲಿ ಓಡಾಡುತ್ತಾರೆ. ವರ್ಷದಲ್ಲಿ 800 ಕೋಟಿ ಜನರು ಪ್ರಯಾಣಿಸುತ್ತಾರೆ. ಬಸ್‌ಗಳಿಗೆ ಹೋಲಿಸಿದಲ್ಲಿ, ರೇಲ್ವೆ ಪ್ರಯಾಣ ದರ ಅತ್ಯಂತ ಕಡಿಮೆ. ಇದರಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ರೈಲು ಹಳಿ ಜೋಡಣೆ ಮಾಡಲಾಗಿದೆ ಎಂದರು.