ಸಾಲ ಮರುಪಾವತಿಸಿದರೆ ಸಂಘಕ್ಕೆ ಲಾಭ
ತರೀಕೆರೆ: ಸಹಕಾರ ಸಂಘಗಳು ಲಾಭದಾಯಕವಾಗಿ ನಡೆಯಲು ಸಹಕರಿಸಬೇಕೆಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ಸಮೀಪದ ಹಾದಿಕೆರೆಯಲ್ಲಿ ನಡೆದ 60ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಚರಣೆಯ ಪಂಚಾಯತ್ ರಾಜ್ ಸಂಸ್ಥೆಗಳು- ಸಹಕಾರಿ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಆಹಾರ ಭದ್ರತೆ ದಿನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಇಂಟರ್ ಸಬ್ಸಿಡಿ ಸಾಲವನ್ನು ಸಹಕಾರ ಸಂಘಗಳಿಗೆ ವಿತರಸಲು ನಿರ್ಧರಿಸಿದ್ದು, ಇದರಿಂದ ರೈತರಿಗೆ ಮಧ್ಯಮಾವಧಿ ಮತ್ತು ಹೆಚ್ಚುವರಿ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದ ಅವರು, ಪಡೆದ ಸಾಲವನ್ನು ಅವಧಿಗೆ ಸರಿಯಾಗಿ ಮರುಪಾವತಿ ಮಾಡಿ ಸಹಕಾರ ಸಂಘಗಳು ಲಾಭದಾಯಕವಾಗಿ ನಡೆಯಲು ಸಹಕರಿಸಬೇಕು ಎಂದು ತಿಳಿಸಿದರು.
438 ಕೋಟಿ ಹಣ ಸಾಲ: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಎ.ಆರ್. ರಾಜಶೇಖರ್ ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ 438 ಕೋಟಿಯನ್ನು ರೈತರಿಗೆ ಸಾಲದ ರೂಪದಲ್ಲಿ ನೀಡಲಾಗಿದ್ದು, 103 ಕೋಟಿ ಹಣ ಕೃಷಿಯೇತರ ಚಟುವಟಿಕೆಗೆ ನೀಡಲಾಗಿದೆ ಎಂದು ತಿಳಿಸಿದ ಅವರು, ಸಹಕಾರಿ ಸಂಘಗಳು ಕೇವಲ ಡಿಸಿಸಿ ಬ್ಯಾಂಕ್ಗಳು ನೀಡುವ ಸಾಲ ಸೌಲಭ್ಯವನ್ನು ಕಾಯ್ದು ಕೂರದೆ ವೈಯಕ್ತಿಕ ಸಂಪನ್ಮೂಲವನ್ನು ಕ್ರೋಡೀಕರಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಮಾತನಾಡಿ, ಸಮಾಜದ ಆರ್ಥಿಕ ಭದ್ರತೆಯನ್ನು ಕಾಯ್ದುಕೊಳ್ಳಲು ಸಹಕಾರಿ ತತ್ವ ಮಹತ್ತರ ಪಾತ್ರ ವಹಿಸಿದೆ ಎಂದು
ತಿಳಿಸಿದರು.
ನಿರ್ದೇಶಕ ಎಂ.ಸಿ. ಶಿವಾನಂದಸ್ವಾಮಿ, ಎಂ.ಬಿ. ಶಂಕರಪ್ಪ ಅವರು ಮಾತನಾಡಿದರು. ಹಾದಿಕೆರೆ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್, ಗ್ರಾಪಂ ಅಧ್ಯಕ್ಷೆ ಸುಮಿತ್ರ ಲಕ್ಷ್ಮೀಶ್, ಜಯಕುಮಾರ್, ಮಹೇಂದ್ರ, ಮಲ್ಲೇಶಪ್ಪ, ಓಂಕಾರಪ್ಪ, ಚಂದ್ರಪ್ಪ, ಪಾರ್ವತಮ್ಮ ಗೋವಿಂದಪ್ಪ ಮತ್ತಿತರರು ಭಾಗವಹಿಸಿದ್ದರು.