ಇಂದು ಪ್ರತಿಭಟನೆ
ಶೃಂಗೇರಿ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಜೆಡಿಎಸ್ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಗುರುವಾರ ಬೃಹತ್ ಪ್ರತಿಭಟನಾ ರ್ಯಾಲಿ ಆಯೋಜಿಸಿದೆ. ಬೆಳಗ್ಗೆ 10 ಗಂಟೆಗೆ ಪಟ್ಟಣದ ಬಸ್ಸು ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಮುಖ್ಯರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡು ಧರಣಿ ಸತ್ಯಾಗ್ರಹ ನಡೆಸಲಿದೆ.
ಗೋರಕ್‌ಸಿಂಗ್ ವರದಿ ಅನುಷ್ಠಾನ, ಹಳದಿ ಎಲೆ ರೋಗ ಪರಿಹಾರ ಪ್ಯಾಕೇಜ್ ಬಿಡುಗಡೆ, ರೈತರ ಸಂಪೂರ್ಣ ಸಾಲಮನ್ನಾ, ಬಿಪಿಎಲ್ ಕಾರ್ಡುದಾರರಿಗೆ ನಿವೇಶನ, ಒತ್ತುವರಿ ಸಮಸ್ಯೆ, ಶಾದಿಭಾಗ್ಯ ಯೋಜನೆ ಎಲ್ಲಾ ವರ್ಗದವರಿಗೆ ವಿಸ್ತರಣೆ, ಬಂದೂಕು ಪರವಾನಗಿ ನೀತಿಯಲ್ಲಿನ ತಾರತಮ್ಯ ನೀತಿ ವಿರುದ್ಧ ಇತ್ಯಾದಿ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಲಿದೆ.
ಶಾಸಕ ವೈಎಸ್‌ವಿ ದತ್ತಾ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ, ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಜಿ.ಜಿ. ಮಂಜುನಾಥ್, ಕ್ಷೇತ್ರ ಯುವ ಜೆಡಿಎಸ್ ಅಧ್ಯಕ್ಷ ರಮೇಶ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಕನಕದಾಸರ ತತ್ವ ಅಳಡಿಸಿಕೊಳ್ಳಲು ಸಲಹೆ
ಮೂಡಿಗೆರೆ: ಯಾವ ಮತವನ್ನೂ ಬಿಡದೇ, ಯಾವ ಮತಕ್ಕೂ ಅಂಟಿಕೊಳ್ಳದೇ, ಸಕಲ ತತ್ವಗಳನ್ನು ಮೀರಿ ಬೆಳೆದು ವಿಶ್ವ ಮಾನವನಾಗಿ ವಿಜೃಂಭಿಸಿದ ಯೋಗ ಪುರುಷ ಕನಕದಾಸರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಕನಕ ನೌಕರರ ಸಂಘದ ಅಧ್ಯಕ್ಷ ಎಂ. ಗಂಗಾಧರ್ ಹೇಳಿದರು.
ಪಟ್ಟಣದ ತಾಲೂಕು ನೌಕರರ ಸಂಘ ಮತ್ತು ರಾಜ್ಯ ಕನಕ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ 526ನೇ ಕನಕ ಜಯಂತಿ ಕಾರ್ಯಕ್ರಮದ ಅಂಗವಾಗಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನಕದಾಸರು ಸಮಾಜದ ಅಂಕುಡೊಂಕುಗಳನ್ನು ಬಿಚ್ಚು ಮಾತುಗಳ ಮೂಲಕ ಚುಚ್ಚಿ ಎಚ್ಚರಿಸಿದ್ದಾರೆ ಎಂದರು.
ಕಾರ್ಯದರ್ಶಿ ಮಂಜಪ್ಪ, ದಾದನಾಯ್ಕ, ಸತೀಶ್, ನವೀನ್, ಲಕ್ಷ್ಮಣ್, ಕೃಷ್ಣಕುಮಾರ್, ಮಲ್ಲಿಕಾರ್ಜುನ, ಉಮೇಶ್, ಡಾ. ವೆಂಕಟೇಶ್, ಎಂ.ಕೆ. ಗೋಪಾಲಕೃಷ್ಣ, ಸತೀಶ್ ಸೇರಿದಂತೆ ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು.