ದಾರ್ಶನಿಕರು ಜಾತಿಗೆ ಸೀಮಿತರಲ್ಲ
ನರಸಿಂಹರಾಜಪುರ: 16ನೇ ಶತಮಾನದಲ್ಲೇ ಕನಕದಾಸರು ಜಾತಿ, ಧರ್ಮಗಳನ್ನು ಮೀರಿ ಮಾನವೀಯತೆ ನೆಲಗಟ್ಟಿನಲ್ಲಿ ಉತ್ತಮ ಸಮಾಜ ಕಟ್ಟುವ ಕನಸು ಕಂಡಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಅಣ್ಣಪ್ಪ ಎನ್. ಮಳೀಮಠ ತಿಳಿಸಿದರು.
ಬುಧವಾರ ಅಂಬೇಡ್ಕರ್ ಭವನದಲ್ಲಿ ನಡೆದ ಕನಕದಾಸರ ಜಯಂತಿ ಸಮಾರಂಭದಲ್ಲಿ ಕನಕದಾಸರ ಕುರಿತು ವಿಶೇಷ ಉಪನ್ಯಾಸ ಮಾಡಿದರು. ಕನಕದಾಸರು, ಬಸವಣ್ಣ ಮುಂತಾದವರು ಯಾವುದೇ ಜಾತಿಗೆ ಸೀಮಿತವಾಗಿರದೆ ಜಾತಿ, ಧರ್ಮವನ್ನು ಮೀರಿ ನಿಂತವರಾಗಿದ್ದಾರೆ. ದುರಂತವೆಂದರೆ ಇಂದು ಅಂತಹ ಮೇರು ವ್ಯಕ್ತಿತ್ವದ ಕವಿಗಳನ್ನು ಇಂದಿನವರು ಒಂದು ಜಾತಿಗೆ ಸೀಮಿತಗೊಳಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಪಂ ಉಪಾಧ್ಯಕ್ಷೆ ಸುಜಾತ ಶಿವಲಿಂಗಪ್ಪ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ಯಾವುದೇ ಆದರ್ಶಗಳನ್ನು ಬೋಧಿಸುವುದಕ್ಕಿಂತ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಆದರ್ಶ ಸಮಾಜ ನಿರ್ಮಾಣವಾಗುತ್ತದೆ. ಎಲ್ಲಾ ಜಾತಿ, ಧರ್ಮದವರು ಒಟ್ಟಾಗಿ ಮಾಲ್ಯಯುತ ಸಮಾಜವನ್ನು ಕಟ್ಟೋಣ. ಮಾನವೀಯತೆಗೆ ಹೆಚ್ಚು ಒತ್ತು ನೀಡೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಕೃಷ್ಣಮೂರ್ತಿ, ದಸಂಸ ಮುಖಂಡರಾದ ಶಿವಣ್ಣ, ನಾಗಪ್ಪ, ಪಪಂ ಮುಖ್ಯಾಧಿಕಾರಿ ರಾಮರುದ್ರಯ್ಯ, ತಾಪಂ ಸಿಇಒ ಜಗದೀಶ್, ಬಿಇಒ ಸಿ.ಎನ್. ರಮೇಶ್ ಉಪಸ್ಥಿತರಿದ್ದರು.
ನರಸಿಂಹರಾಜಪುರದ ಸರ್ಕಾರಿ ಶಾಲೆಯ ಸಂಗೀತ ಶಿಕ್ಷಕ ಸುರೇಶ್ ಹಾಗೂ ಬಾಳೆಹೊನ್ನೂರು ಶಾಲೆಯ ಸಂಗೀತ ಶಿಕ್ಷಕ ಪಂಚಾಕ್ಷರಿ ಕನಕದಾಸರ ಕೀರ್ತನೆಗಳನ್ನು ಹಾಡಿದರು. ಬಿ.ಜಿ. ಮಾಳಮ್ಮನವರ್ ಸ್ವಾಗತಿಸಿದರು. ಕೃಷ್ಣನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ವಂದಿಸಿದರು.