ದಾಸ ಸಾಹಿತ್ಯಕ್ಕೆ ಕನಕರ ಕೊಡುಗೆ ಅನನ್ಯ
ಕ.ಪ್ರ.ವಾರ್ತೆ ಶೃಂಗೇರಿ ನ. 20
ದಾಸ ಸಾಹಿತ್ಯದಲ್ಲಿ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದ ಭಕ್ತ ಕನಕದಾಸರು ಕೇವಲ ಕುರುಬರು, ಹಿಂದುಳಿದ ವರ್ಗದವರಿಗೆ ಸೀಮಿತವಾಗಿರದೆ ಎಲ್ಲಾ ವರ್ಗಗಳಿಗೆ ಸೇರಿದವರಾಗಿದ್ದರು. ಕನ್ನಡ ದಾಸ ಸಾಹಿತ್ಯ, ಭಕ್ತಿಪರಂಪರೆಗೆ ಕನಕದಾಸರ ಕೊಡುಗೆ ಅನನ್ಯವಾದುದು ಎಂದು ಜಿಪಂ ಸದಸ್ಯ ಬಿ. ಶಿವಶಂಕರ್ ತಿಳಿಸಿದರು.
ಬುಧವಾರ ಪಟ್ಟಣದ ಡಾ.ವಿ.ಆರ್. ಗೌರೀಶಂಕರ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶಿಷ್ಠ ಸ್ಥಾನ: ಕನ್ನಡ ಸಾಹಿತ್ಯದಲ್ಲಿ ಕನಕದಾಸರಿಗೆ ವಿಶಿಷ್ಟ ಸ್ಥಾನವಿದೆ. ನಮ್ಮ ಸಮಕಾಲೀನ ವಾತಾವರಣದಲ್ಲಿ ಹಲವು ಕಾವ್ಯ ಹಾಗೂ ಜೀವನ ಮೌಲ್ಯಗಳಿಗೆ ಸ್ಫೂರ್ತಿಯಾಗಿವೆ. ಕನಕರು ತಮ್ಮ ವೈಚಾರಿಕ ಮನೋಭಾವದಿಂದ ದಾಸ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿ, ಸಾಮಾಜಿಕ ನೆಲೆಗಟ್ಟನ್ನು ಭದ್ರಗೊಳಿಸಿದರು ಎಂದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಜಿ.ಎಂ. ಸುರೇಂದ್ರ, ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಜಗದ್ಗಿರು ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯ ಶಿಕ್ಷಕ ಕೃಷ್ಣಮೂರ್ತಿ ಭಕ್ತ ಕನಕದಾಸರ ಜೀವನ, ಉಪದೇಶಗಳ ಕುರಿತು ಉಪನ್ಯಾಸ ನೀಡಿದರು.