'ಬೆಳಗಾವಿ ಅಧಿವೇಶನದಲ್ಲಿ ಮುತ್ತಿಗೆ'
ತರೀಕೆರೆ: ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತ್ರುವ ಕಂದಾಯ ವಸೂಲಿ, ನೀರುಗಂಟಿ, ಜಾಡುಮಾಲಿಗಳ ಸಂಬಳ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಿ. 25ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮುತ್ತಿಗೆ ಹಾಕಿ ರಾಜ್ಯಾದ್ಯಂತ ಎಐಟಿಯುಸಿ ಸಂಘಟನೆ ಅಡಿಯಲ್ಲಿ ಗ್ರಾಪಂ ನೌಕರರ ಹೋರಾಟ ನಡೆಯಲಿದೆ ಎಂದು ನೌಕರರ ಫೆಡರೇಶನ್ ಜಿಲ್ಲಾ ಸಂಚಾಲಕ ಟಿ.ಜಿ.ಶಿವಕುಮಾರ್ ಅವರು ಕೋರಿದ್ದಾರೆ.
ಈ ಸಂಬಂಧ ತರೀಕೆರೆ ತಾಲೂಕು ಮತ್ತು ಚಿಕ್ಕಮಗಳೂರು ಜಿಲ್ಲೆಯಿಂದ ಹೊರಡುವ ಗ್ರಾಪಂ ನೌಕರರು ದಿ.24 ರಂದು ಬೀರೂರು ರೇಲ್ವೆ ನಿಲ್ದಾಣಕ್ಕೆ 10 ಗಂಟೆಗೆ ಬಂದು ಸೇರಬೇಕು. 2ದಿನ ಮುಂಚಿತವಾಗಿ ಬ್ಯಾಡ್ಜ್ ಪಡೆದು ಹೆಸರು ನೋಂದಾಯಿಸಬೇಕು ಎಂದು ಅವರು ತಿಳಿಸಿದ್ದಾರೆ.
ಅಂತರ್ಜಾಲ ಪ್ರಪಂಚಕ್ಕೆ ಚಾಲನೆ
ನರಸಿಂಹರಾಜಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಅಂತರ್ಜಾಲ ಜ್ಞಾನವು ಅಗತ್ಯವಾಗಿದೆ ಎಂದು ಜಿಪಂ ಉಪಾಧ್ಯಕ್ಷೆ ಸುಜಾತ ತಿಳಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಪ್ರಾರಂಭಗೊಂಡ 3 ದಿನಗಳ ಪುಟಾಣಿ ಅಂತರ್ಜಾಲ ಪ್ರಪಂಚ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೆ ಶಿಕ್ಷಣ ಪಡೆಯುತ್ತಿದ್ದ ಮಕ್ಕಳಿಗೆ ಕಂಪ್ಯೂಟರ್, ಇಂಟರ್ನೆಟ್ ಮುಂತಾದ ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಇರುತ್ತಿರಲಿಲ್ಲ. ಈಗಿನ ಮಕ್ಕಳಿಗೆ ಇಂತಹ ಅವಕಾಶ ಬಂದಿದ್ದು, ಶಿಕ್ಷಣ ಇಲಾಖೆ ಈ ಅಂತರ್ಜಾಲ ತರಬೇತಿಯನ್ನು ಉಪಯೋಗಿಸಿಕೊಳ್ಳುವಂತೆ ಕರೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಮೇಶ್, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಟರ್ನೆಟ್ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 3 ದಿನಗಳ ಕಾಲ ನಡೆಸಲಾಗುತ್ತಿದ್ದು, 6 ಮತ್ತು 7ನೇ ತರಗತಿ ಮಕ್ಕಳನ್ನು ತಂಡಗಳಾಗಿ ವಿಂಗಡಿಸಿ 1 ಗಂಟೆಗಳ ಕಾಲದಲ್ಲಿ ಇಂಟರ್ನೆಟ್ ತರಬೇತಿ ನೀಡಲಾಗುತ್ತದೆ ಎಂದರು.