ಭಕ್ತ ಕನಕದಾಸ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ, ತರೀಕೆರ, ನ.20
ಸಮಾಜದಲ್ಲಿ ತುಂಬಿದ್ದ ಅನಿಷ್ಟ ಜಾತಿ ಪದ್ಧತಿ ವಿರುದ್ಧ ಹೋರಾಡಿದ ಮಹನೀಯರಲ್ಲಿ ಭಕ್ತ ಕನಕದಾಸರು ಶ್ರೇಷ್ಠರು ಎಂದು ಪಟ್ಟಣದ ಶಾಸಕರ ಮಾದರಿ ಸಹಿಪ್ರಾ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ವೆಂಕಟೇಶ್ ತಿಳಿಸಿದರು.
ಶಾಸಕರ ಮಾ.ಹಿ.ಸ.ಪ್ರಾ. ಶಾಲೆ ಮತ್ತು ಪೇಟಾ ಹಿ.ಪ್ರಾ. ಶಾಲೆ ವತಿಯಿಂದ ಶಾಲೆ ಆವರಣದಲ್ಲಿ ನಡೆದ ಕನಕದಾಸರ 525ನೇ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ತೊಲಗಿಸಲು ತಮ್ಮ ಕೀರ್ತನೆಯಲ್ಲಿ ಹೇಳಿದ್ದಾರೆ. ಕನಕದಾಸರು 16ನೇ ಶತಮಾನದಲ್ಲೇ ಅಂಧ ಶ್ರದ್ಧೆಗಳನ್ನು ಮೂಢನಂಬಿಕೆಯನ್ನು ಜಾತಿ ವಿಷ ಬೀಜ ಕಿತ್ತೊಗೆಯಲು ಪ್ರಯತ್ನಿಸಿದರು. ಪುರೋಹಿತಶಾಹಿಗಳು ಇವರ ಭಕ್ತಿ ಅನುಮಾನಿಸಿದರೂ ಇವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದರು ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ಸಾದಿಕ್ ಬಾಷ, ಶಿಕ್ಷಕರಾದ ಹೊನ್ನಲಿಂಗಪ್ಪ, ಇಂದ್ರಮ್ಮ, ಸುರೇಶ್ ಮಾತನಾಡಿದರು.
ವಿದ್ಯಾರ್ಥಿ ಶೇಖರ್ ಅವರು ಕನಕದಾಸರ ಸ್ಥಬ್ಧ ಚಿತ್ರ ಧರಿಸಿದ್ದರು. ಗಣೇಶಪ್ಪ, ಮಮತ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
--
ಪ್ರತಿಭೋತ್ಸವ
ನರಸಿಂಹರಾಜಪುರ: ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಮತ್ತು ಶೆಟ್ಟಿಕೊಪ್ಪ ಮೊಹಿದ್ದೀನ್ ಜುಮ್ಮಾ ಮಸೀದಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಎಸ್‌ಎಸ್‌ಎಫ್ ಜಿಲ್ಲಾ ಪ್ರತಿಭೋತ್ಸವ ಕಾರ್ಯಕ್ರಮವು ಶೆಟ್ಟಿಕೊಪ್ಪ ಸಮೀಪದ ಭದ್ರಾ ಕಾಲೋನಿಯ ರಂಗಮಂದಿರದಲ್ಲಿ ನಡೆಯಿತು.