ಸಂತರ ಆದರ್ಶ ಪಾಲಿಸಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ನ. 20
ಸಂತರನ್ನು ಹಾಡಿ ಹೊಗಳಿದರೆ ಸಾಲದು, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂತರ, ಹಿರಿಯರ ದಾರಿಯಲ್ಲಿ ನಡೆಯಬೇಕೆಂದು ಹೇಳುತ್ತೇವೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಯಾವ ದಾರಿಯಲ್ಲಿ ಸಾಗಬೇಕೆಂಬ ಗೊಂದಲ ನಮ್ಮಲ್ಲಿ ಇದೆ ಎಂದರು.
ಪರಿವರ್ತನೆ ಆಗಬೇಕು: ಸಂತರ ನೆನಪುಗಳು ಸದಾ ನಮ್ಮಲ್ಲಿ ಇದ್ದಾಗ ಮಾತ್ರ ಇಂತಹ ಆಚರಣೆಗಳಿಗೆ ಅರ್ಥ ಬರಲಿದೆ. ಆಗ ನಮ್ಮ ವ್ಯಕ್ತಿತ್ವ, ಚಿಂತನೆಯಲ್ಲಿ ಬದಲಾವಣೆಯಾಗುತ್ತದೆ. ಜನಪ್ರತಿನಿಧಿಗಳು ತಮಗೆ, ತಮ್ಮ ಮಕ್ಕಳಿಗಾಗಿ ಅಸ್ತಿಯನ್ನು ಮಾಡುತ್ತಿದ್ದಾರೆ. ನಾವು ಬೇರೆಯವರಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು. ನಮ್ಮಲ್ಲಿ ಪರಿವರ್ತನೆ ಆಗದೆ ಜನರಲ್ಲಿ ಪರಿವರ್ತನೆ ಸಾಧ್ಯವೇ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಒಳ್ಳೆಯವರನ್ನು ಗುರುತಿಸಿ: ಬೇರೆಯವರಿಗೆ ಕೆಟ್ಟದನ್ನು ಮಾಡದೆ, ಒಳ್ಳೆಯದನ್ನು ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಜಾತಿ, ಜಾತಿಗಳ ನಡುವೆ ಗೊಂದಲಗಳಿವೆ. ಅದನ್ನು ನಿವಾರಣೆ ಆಗಬೇಕಾಗಿದೆ. ಅವಕಾಶ ಸಿಕ್ಕಾಗ, ಅಧಿಕಾರ ಬಂದಾಗ ಅದನ್ನು ಬೇರೆಯವರ ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳಬೇಕು. ನನ್ನಿಂದ ಸಮಾಜಕ್ಕೆ ಏನನ್ನೂ ಕೂಡಬೇಕು ಎಂಬುದನ್ನು ಚಿಂತನೆ ಮಾಡಬೇಕು. ಒಳ್ಳೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಗುರುತಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ವೈಭವೀಕರಣ ಸಲ್ಲ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಟಿ. ರವಿ ಮಾತನಾಡಿ, ಬಸವಣ್ಣ, ಕನಕದಾಸರು ಸೇರಿದಂತೆ ಹಲವರು ಮಹನೀಯರು ಜಾತಿಯ ಚೌಕಟ್ಟು ಮೀರಿ ಬೆಳೆದವರು. ಆದರೆ, ಅವರನ್ನು ಜಾತಿಯ ಹೆಸರಿನಲ್ಲಿ ವೈಭವಿಕರಿಸುವುದನ್ನು ನೋಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಶ್ರೇಷ್ಟತೆ ನೆಲೆಯಲ್ಲಿ ಅವರನ್ನು ಗುರುತಿಸಿ ಸಂಕುಚಿತಗೊಳಿಸದೆ ನೋಡಬೇಕು ಎಂದು ಕರೆ ನೀಡಿದರು.
ಜಾತಿ ಮತ್ತು ಜಾತಿಯತೆ ಸಮಾಜಕ್ಕೆ ಹೊಕ್ಕಿರುವ ಮುಳ್ಳು. ಜಾತಿಯನ್ನು ತೊಡೆದು ಹಾಕಬೇಕು. ಮನ, ಮನೆಯಿಂದ ಜಾತೀಯತೆಯನ್ನು ಹೊರಗೆ ಹಾಕಬೇಕು. ಜಾತಿಯ ಮೇಲೆ ಶ್ರೇಷ್ಠ ವ್ಯಕ್ತಿಯಾದವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಅಧಿಕಾರದ ದರ್ಪ, ಶ್ರೀಮಂತಿಕೆ, ಜಾತಿಯತೆಯಿಂದ ಯಾರೂ ದೊಡ್ಡವರಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಮೋಟಮ್ಮ, ಎ.ವಿ. ಗಾಯತ್ರಿ ಶಾಂತೇಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾಧಿಕಾರಿ ಶೇಖರಪ್ಪ, ಜಿಪಂನ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಠಲ್, ತಾಪಂ ಅಧ್ಯಕ್ಷೆ ಅಂಬಿಕಾ ಶಿವಕುಮಾರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ತಾಲೂಕು ಅಧ್ಯಕ್ಷ ಚಂದ್ರೇಗೌಡ, ಶಾಂತೇಗೌಡ, ಪುಟ್ಟೇಗೌಡ, ಶಾಂತೇಗೌಡ, ನಿಂಗೇಗೌಡ, ಎ.ಎನ್. ಮಹೇಶ್, ಗೌರಮ್ಮ ಬಸವೇಗೌಡ, ಮರೀಗೌಡ ಹಾಗೂ ರಂಗಪ್ಪ, ಕೆ.ಟಿ. ರಾಧಾಕೃಷ್ಣ ಉಪಸ್ಥಿತರಿದ್ದರು.