ಪ್ರಗತಿಪರ ಕೃಷಿಕ ಕೇಶವಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ನ. 21
ಇಂಟರ್ನ್ಯಾಷನಲ್ ಪೆಪ್ಪರ್ ಕಮಿಟಿ ವತಿಯಿಂದ ನೀಡಲಾಗುವ ಬೆಸ್ಟ್ ಪೆಪ್ಪರ್ ಫಾರ್ಮರ್- 2012 ಅಂತಾರಾಷ್ಟ್ರೀಯ ಪ್ರಶಸ್ತಿಗೆ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಪ್ರಗತಿಪರ ಕೃಷಿಕ ಕೆ.ಆರ್. ಕೇಶವ ಪಾತ್ರರಾಗಿದ್ದಾರೆ.
ನೈಸರ್ಗಿಕ ಕೃಷಿಯ ಮೂಲಕ ಅತ್ಯುತ್ತಮವಾಗಿ ಕಾಳುಮೆಣಸಿನ ಬೆಳೆ ಬೆಳೆದ ಹಿನ್ನೆಲೆಯಲ್ಲಿ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ಮಲೇಶಿಯಾದ ಕುಚ್ಚಿನ್ ನಗರದಲ್ಲಿ ಇತ್ತೀಚೆಗೆ ಜರುಗಿದ ವಿಶ್ವ ಕಾಳುಮೆಣಸು ಬೆಳೆಗಾರರ ಸಮ್ಮೇಳನದಲ್ಲಿ ಮಲೇಶಿಯಾದ ತೋಟಗಾರಿಕೆ ಸಚಿವ ದಾತುಕ್ ಅಮರ್ ಅವರು ಕೇಶವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಗತಿಪರ ಕೃಷಿಕ ಹಾಗೂ ಕಾಫಿ ಬೆಳೆಗಾರರೂ ಆಗಿರುವ ಕೇಶವ ಅವರಿಗೆ ಅತ್ಯುತ್ತಮವಾಗಿ ವೆನಿಲ್ಲಾ ಬೆಳೆ ಬೆಳೆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬೆಸ್ಟ್ ಗ್ರೋಯರ್ ಇನ್ ಇಂಡಿಯಾ ಪ್ರಶಸ್ತಿ ಈಗಾಗಲೇ ಲಭಿಸಿದೆ.
ನೈಸರ್ಗಿಕ ಕೃಷಿ ಮೂಲಕ ಕಾಳುಮೆಣಸನ್ನು ತಮ್ಮ ತೋಟದಲ್ಲಿ ಅತ್ಯುತ್ತಮವಾಗಿ ಬೆಳೆದು ಪ್ರತಿ ಎಕರೆಗೆ ಒಂದೂವರೆಯಿಂದ ಎರಡು ಟನ್ನಷ್ಟು ಇಳುವರಿ ಸಾಧಿಸಿರುವ ಕೇಶವ ಅವರು ಬ್ಲಾಕ್ ಗೋಲ್ಡ್ಲೀಗ್ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಆಸಕ್ತರಿಗೆ ಕಾಳುಮೆಣಸು ಬೆಳೆಯುವ ವಿಧಾನದ ಬಗ್ಗೆ ತರಬೇತಿ ಸಹ ನೀಡುತ್ತಿದ್ದಾರೆ.