'ಓದಿನಿಂದ ಮಾನಸಿಕ, ದೈಹಿಕ ಚಲನೆಗೆ ಉತ್ತೇಜನ'
ಚಿಕ್ಕಮಗಳೂರು: ಓದು ನಮ್ಮ ಮಾನಸಿಕ, ದೈಹಿಕ ಚಲನೆಗೆ ಅವಕಾಶ ನೀಡುತ್ತದೆ. ಹಾಗೂ ನಾಗರೀಕತೆ ಸಂಸ್ಕೃತಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹೆಚ್.ಎಂ. ರುದ್ರಸ್ವಾಮಿ ಹೇಳಿದ್ದಾರೆ.
ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ನಡೆದ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಊರಿನಲ್ಲಿ ಒಂದು ಗ್ರಂಥಾಲಯವಿದ್ದರೆ ಅಲ್ಲಿ ನಾಗರೀಕ ಸಂಸ್ಕೃತಿ ವಿಜೃಂಬಿಸುತ್ತದೆ. ಹಿಂದಿನ ತಲೆಮಾರಿನ ರಾಜಕಾರಣಿಗಳು, ಆಡಳಿತಗಾರರು ಓದುವ, ಬರೆಯುವ ಹವ್ಯಾಸವಿಟ್ಟುಕೊಂಡು ಪರಿಪೂರ್ಣ ಅರಿವಿನಿಂದ ಆದರ್ಶ ನಾಯಕರಾಗಿ, ಸಮರ್ಥ ಆಡಳಿತಗಾರರಾಗಿ ಹೊರಹೊಮ್ಮುತ್ತಿದ್ದರು ಎಂದು ಹೇಳಿದರು.
ಪುಸ್ತಕಗಳ ಜ್ಞಾನ ಅಗತ್ಯ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಚನ್ನಬಸಪ್ಪ ಮಾತನಾಡಿ, ಮಕ್ಕಳಿಗೆ ಕೇವಲ ಪಠ್ಯ ಓದುವುದು ಮಾತ್ರವಲ್ಲದೆ ಇತರೆ ಪುಸ್ತಕಗಳ ಜ್ಞಾನವನ್ನು ಪಡೆದುಕೊಳ್ಳಲು ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಲು ಪೋಷಕರು ಮುಂದಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಿ. ತಿಪ್ಪೇರುದ್ರಪ್ಪ ಮಾತನಾಡಿ, ಓದುವ ವ್ಯಕ್ತಿಗೆ ಗ್ರಹಣಶಕ್ತಿ, ವಿಚಾರಶೀಲತೆ ಹೆಚ್ಚುತ್ತದೆ ಗ್ರಂಥಾಲಯದಲ್ಲಿ ಸಂಗ್ರಹಗೊಂಡಿರುವ ಪುಸ್ತಕಗಳಲ್ಲಿನ ಜ್ಞಾನ ಭಂಡಾರವನ್ನು ಓದುಗರು ಸದುಪಯೋಗ ಪಡಿಸಿಕೊಳ್ಳಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿ. ಚಂದ್ರೇಗೌಡ ಉದಯೋನ್ಮುಖ ಬರಹಗಾರರಿಗೆ ಕಾವ್ಯ ಕಮ್ಮಟ ನಡೆಸುವ ಯೋಜನೆ ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಜನಪದ ಸಾಹಿತಿ ವಕೀಲ ಎಸ್.ಎಸ್. ವೆಂಕಟೇಶ್, ಸಾಹಿತಿ ಪ್ರಾಂಶುಪಾಲ ಜಿ.ವಿ. ಆನಂದಮೂರ್ತಿ, ರೈತಮುಖಂಡ ಗುರುಶಾಂತಪ್ಪ, ಪ್ರಗತಿಪರ ಚಿಂತಕ ಬಿ. ಅಮ್ಜದ್, ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ಅಶೋಕ ನಡಕಟ್ಟಿ ಭಾಗವಹಿಸಿದ್ದರು. ಕತೆ, ಕವನ, ಪ್ರಬಂಧಗಳನ್ನು ಬರೆದು ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.