ಕ್ರೀಡೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ
ಚಿಕ್ಕಮಗಳೂರು: ಕ್ರೀಡೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಎಂದು ಉಡುಪಿ ಅದಮಾರುಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಆಲ್ದೂರಿನ ಪೂರ್ಣಪ್ರಜ್ಞೆ ಶಿಕ್ಷಣ ಕೇಂದ್ರದ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ಅಂತರ ಪೂರ್ಣಪ್ರಜ್ಞಾ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕ್ರೀಡೆಗಳು ತಾಳ್ಮೆಯಿಂದ ಆರಂಭಿಸಿ ಜೀವನಕ್ಕೆ ಬೇಕಾದ ಅನೇಕ ಒಳ್ಳೆ ಗುಣಗಳನ್ನು ಕಲಿಸುತ್ತದೆ ಎಂದರು.
ನಮ್ಮದೇ ಸಂಸ್ಥೆಯ ಬೇರೆ ಮಕ್ಕಳೊಂದಿಗೆ ಬೆರೆತು ಆಟ ಆಡುವುದರಿಂದ ಉನ್ನತ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಹೊಸಮುಖಕ್ಕೆ ತಬ್ಬಿಬ್ಬಾಗುವ, ಹೆದರುವ ಪ್ರಮೇಯ ಬರುವುದಿಲ್ಲ. ಅದಕ್ಕಾಗಿಯೇ ಪ್ರತಿವರ್ಷ ಪೂರ್ಣಪ್ರಜ್ಞೆ ಅಂತರ ಶಾಲಾ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಆಲ್ದೂರು ಶಾಲಾ ತಂಡ ರಾಷ್ಟ್ರೀಯ ಕ್ರೀಡೆಯಲ್ಲಿ ಬಹುಮಾನ ಗಳಿಸಿದ್ದಕ್ಕಾಗಿ ಅಭಿನಂದಿಸಿದ ಶ್ರೀಗಳು, ಹಂತ ಹಂತವಾಗಿ ಪೂರ್ಣಪ್ರಜ್ಞೆ ವಿದ್ಯಾರ್ಥಿಗಳು ಸಾಧನೆಮಾಡಿ ಒಲಂಪಿಕ್ನಲ್ಲೂ ದೇಶಕ್ಕೆ ಚಿನ್ನದ ಪದಕ ತಂದುಕೊಡುವ ಸಾಮರ್ಥ್ಯ ಹೊಂದಲೆಂದು ಹಾರೈಸಿದರು.
ನಾಯಕತ್ವ ಗುಣ ವೃದ್ಧಿ: ಕ್ರೀಡಾಕೂಟ ಉದ್ಘಾಟಿಸಿದ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಚ್.ಇ. ರವಿಕುಮಾರ್ ಮಾತನಾಡಿ, ಆಟಗಳಿಂದ ಸಂಘಟನಾ ಮೌಲ್ಯ, ನಾಯಕತ್ವ ಗುಣ ಬೆಳೆಯುತ್ತದೆ. ಸಹನೆ, ಕೌಶಲ್ಯ, ಕ್ರೀಡಾಸ್ಫೂರ್ತಿ ಕಲಿಯಬಹುದು. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸಮಚಿತ್ತದ ಮನಸ್ಥಿತಿ ರೂಢಿಸಿಕೊಳ್ಳಬಹುದು. ಕಷ್ಟಸಂಹಿಷ್ಣುತೆ, ತಂಡಕ್ಕಾಗಿ ಆಡಬೇಕೆಂಬ ಮನೋಭಾವ ನಮ್ಮದಾಗುತ್ತದೆ. ಪಠ್ಯ ಪುಸ್ತಕಗಳು ಪದವಿ ಕೊಡಿಸಿದರೆ, ಕ್ರೀಡೆ ಬದುಕಿನ ಮೌಲ್ಯಗಳನ್ನು ಬೆಳೆಸುತ್ತದೆ ಎಂದರು.
ಆಲ್ದೂರು ಪೂರ್ಣಪ್ರಜ್ಞೆ ಶಾಲೆ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ವಿಶೇಷ ಸಾಧನೆ ಮಾಡಿದೆ. ಕಳೆದ 25 ವರ್ಷಗಳ ಅವಧಿಯಲ್ಲಿ ಶಿಕ್ಷಣ ಇಲಾಖೆಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ಹಿರಿಮೆ ಈ ಶಾಲೆಗೆ ಸಲ್ಲುತ್ತದೆ ಎಂದ ರವಿಕುಮಾರ್, ಥ್ರೋಬಾಲ್ನಲ್ಲಿ ಬೆಳ್ಳಿ ಮತ್ತು ಕಂಚು ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿರುವ ಶಾಲಾ ತಂಡ ಮುಂಬರುವ ದಿನಗಳಲ್ಲಿ ಚಿನ್ನದ ಪದಕ ಗೆಲ್ಲಲ್ಲಿ ಎಂದು ಹಾರೈಸಿದರು.
ಆತ್ಮವಿಶ್ವಾಸ ತುಂಬುವ ಶ್ರೀಗಳು: ಆಲ್ದೂರು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಬಿ.ಬಿ. ರೇಣುಕಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕವಾಗಿ ಮಕ್ಕಳನ್ನು ಬೆಳೆಸಿದಾಗ ಸತ್ಪ್ರಜೆಗಳಾಗುತ್ತಾರೆಂಬ ನಂಬಿಕೆ ಹಿರಿಯ ಶ್ರೀಗಳಲ್ಲಿತ್ತು. 1978 ರಲ್ಲಿ ಇಲ್ಲಿ ಶಾಲೆ ಆರಂಭಗೊಂಡಾಗಿನಿಂದ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಸ್ವಾಮಿಜೀ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಮಕ್ಕಳಲ್ಲಿ ಕ್ರೀಡಾ ಮನೋಭಾವ, ಆಸಕ್ತಿ ಜೊತೆಗೆ ಆತ್ಮವಿಶ್ವಾಸ ಮೂಡಿಸುವಲ್ಲಿ ಕ್ರೀಡಾಕೂಟಗಳು ಮಹತ್ವದ ಪಾತ್ರವಹಿಸುತ್ತವೆ ಎಂದರು.
ಸಹ ಕಾರ್ಯದರ್ಶಿ ಗಿರೀಶ್, ಅತಿಥೇಯ ಶಾಲಾ ಮುಖ್ಯ ಶಿಕ್ಷಕರಾದ ನಿರ್ಮಲಾ ಮೆನನ್ ಮತ್ತು ವೆಂಕಟೇಶ್, ದೈಹಿಕ ಶಿಕ್ಷಕ ಕರುಣಾಕರಶೆಟ್ಟಿ ವೇದಿಕೆಯಲ್ಲಿದ್ದರು. ರಾಜ್ಯಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡ ಮಕ್ಕಳನ್ನು ಸ್ವಾಮೀಜಿ ಗೌರವಿಸಿದರು.