ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಟ್ಟಡ ಕಾಮಗಾರಿಗೆ ವಿದ್ಯಾರ್ಥಿಗಳ ಬಳಕೆ

Vishwanath S
Updated On : 24 Nov 2013, 3:03 am

ಚಿಕ್ಕಮಗಳೂರು: ವಿದ್ಯಾರ್ಥಿಗಳನ್ನು ಶಾಲೆಯ ಕೆಲಸಕ್ಕೆ ಬಳಸಿಕೊಳ್ಳುವಂತ್ತಿಲ್ಲ. ಆದರೆ, ಚಿಕ್ಕಮಗಳೂರಿನ ಶಂಕರಪುರ ಬಡಾವಣೆಯಲ್ಲಿರುವ ಅಂಬೇಡ್ಕರ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಶಾಲಾ ಕಟ್ಟಡ ನಿರ್ಮಾಣದ ಕಾಮಗಾರಿಗೆ ಬಳಸಿಕೊಂಡಿರುವುದು ಶನಿವಾರ ಬೆಳಕಿಗೆ ಬಂದಿತು.
ಮಕ್ಕಳ ಬಳಕೆ ಬಗ್ಗೆ ತನಿಖೆ ನಡೆಸಲು ಮಕ್ಕಳ ಕಲ್ಯಾಣ ಸಮಿತಿ ಸಮಿತಿಯೊಂದನ್ನು ರಚನೆ ಮಾಡಿದೆ. ಅಂಬೇಡ್ಕರ್ ವಿದ್ಯಾಸಂಸ್ಥೆಯ ಕಟ್ಟಡದ ಮೊದಲ ಮಹಡಿ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಶನಿವಾರ ಮಧ್ಯಾಹ್ನ ಶಾಲೆಯ ವಿದ್ಯಾರ್ಥಿಗಳು ಮರಳನ್ನು ಚೀಲದಲ್ಲಿ ತುಂಬಿ ಮೇಲಿನ ಅಂತಸ್ತಿಗೆ ತೆಗೆದುಕೊಂಡು ಹೋಗುತ್ತಿದ್ದರು.
ಮಕ್ಕಳೊಂದಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಸಹ ಈ ಕೆಲಸದಲ್ಲಿ ಪಾಲ್ಗೊಂಡಿದ್ದರು.
ಈ ವಿಷಯ ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಮಕ್ಕಳು ಮರಳನ್ನು ಹೊರುತ್ತಿರುವುದು ಗಮನಕ್ಕೆ ಬಂದಿತು.
ಈ ಸಂಬಂಧ ವಿದ್ಯಾಸಂಸ್ಥೆಯವರು ಮಕ್ಕಳೊಂದಿಗೆ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ, ಮಕ್ಕಳನ್ನು ಬಲವಂತಾಗಿ ಈ ಕೆಲಸಕ್ಕೆ ಬಳಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ತರಗತಿಯ ಬಿಡುವಿನ ವೇಳೆಯಲ್ಲಿ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಮರಳು ಹಾಗೂ ಜಲ್ಲಿಯನ್ನು ಮೇಲಿನ ಅಂತಸ್ತಿಗೆ ತೆಗೆದುಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದ್ದರಿಂದ ಆ ಕೆಲಸಕ್ಕೆ ಅವರು ಕೈಜೋಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಒತ್ತಾಯಿಸಿಲ್ಲ: ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಅಂಬೇಡ್ಕರ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜಿ.ಕೆ. ಬಸವರಾಜ್, ಮಕ್ಕಳನ್ನು ಬಲವಂತವಾಗಿ ಈ ಕೆಲಸಕ್ಕೆ ಬಳಸಿಕೊಂಡಿಲ್ಲ. ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಪಡೆದಿರುವವರಿಗೆ ಕೆಲಸದವರು ಕೈ ಕೊಟ್ಟಿದ್ದು, ಭಾನುವಾರವೇ ಮೇಲಿನ ಅಂತಸ್ತಿನ ಚುರ್ಕಿ ಕಾರ್ಯ ಇರುವುದರಿಂದ ಮರಳು ಹಾಗೂ ಜಲ್ಲಿಯನ್ನು ಮೇಲಿನ ಅಂತಸ್ತಿಗೆ ಹಾಕುವ ಕೆಲಸದಲ್ಲಿ ಶಿಕ್ಷಕರು ಹಾಗೂ ಶಾಲಾಭಿವೃದ್ಧಿಯವರು ಸ್ವಯಂ ಪ್ರೇರಿತರಾಗಿ ಮುಂದಾಗಿದ್ದರು. ಇದೇ ವೇಳೆಗೆ ಶಾಲೆಯ ಕೆಲವು ಮಕ್ಕಳು ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸ್ವಯಂ ಪ್ರೇರಣೆಯಿಂದ ಕೆಲಸ: ಕಟ್ಟಡ ನಿರ್ಮಾಣ ಕಾಮಗಾರಿಗೆ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಬಗ್ಗೆ ಮಕ್ಕಳ ರಕ್ಷಣಾಧಿಕಾರಿ ರಂಗನಾಥ್ ಅವರನ್ನು ಸಂಪರ್ಕಿಸಿದಾಗ, ಮಧ್ಯಾಹ್ನವೇ 5 ವಿದ್ಯಾರ್ಥಿಗಳನ್ನು ಕರೆಸಿ ವಿಚಾರಣೆ ನಡೆಸಲಾಗಿದ್ದು, ಅವರುಗಳು ಸ್ವಯಂ ಪ್ರೇರಿತವಾಗಿ ಶಿಕ್ಷಕರಿಗೆ ಸಹಾಯ ಮಾಡಲು ಈ ಕೆಲಸ ಮಾಡಿರುವುದಾಗಿ ಹೇಳಿದರು.
ಇದರಲ್ಲಿ ಯಾರೂ ಸಹ ಬಲವಂತಾಗಿ ತಮ್ಮನ್ನು ಕೆಲಸಕ್ಕೆ ಬಳಸಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.
ಆದರೂ ಸಹ ಇದರ ಬಗ್ಗೆ ತನಿಖೆ ನಡೆಸಲು ಕ್ಷೇತ್ರ ಶಿಕ್ಷಣಾಧಿಕಾರಿ, ಬಾಲ ಕಾರ್ಮಿಕ ಅಧಿಕಾರಿಗಳು ಒಳಗೊಂಡ ತನಿಖಾ ಸಮಿತಿಯನ್ನು ರಚನೆ ಮಾಡಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಈ ಸಮಿತಿಗೆ ಸೂಚನೆ ನೀಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮಮತಾ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement