ನಿರಾಶ್ರಿತರ ಬಾಳಲ್ಲಿ ನಿರಾಸೆ ಕಾರ್ಮೋಡ
ಕ.ಪ್ರ.ವಾರ್ತೆ, ಮೂಡಿಗೆರೆ, ನ.24
ತತ್ಕೊಳ ಅರಣ್ಯದಲ್ಲಿ ವಾಸಿಸುತ್ತಿದ್ದ 109 ಕುಟುಂಬಗಳನ್ನು ಒಕ್ಕಲೆಬ್ಬಿಸಿ 11 ವರ್ಷ ಕಳೆದರೂ ಅವರ ಸಮಸ್ಯೆ ಬಗ್ಗೆ ಸರ್ಕಾರ ಸ್ಪಂದಿಸುತ್ತಿಲ್ಲ.
ಸರ್ಕಾರ ಉಗ್ಗೆಹಳ್ಳಿಯಲ್ಲಿ 3.20 ಎಕರೆ ಜಾಗದಲ್ಲಿ ವಾಸಿಸುತ್ತಿರುವ 25 ತತ್ಕೊಳ ಕುಟುಂಬಗಳಿಗೆ ಖಾಲಿ ನಿವೇಶನ ಜಾಗ ನೀಡಿದೆ. ಅದರಲ್ಲಿ ವಾಸಿಸುತ್ತಿರುವ ನಿರಾಶ್ರಿತರ 10 ಕುಟುಂಬಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ. ಅಧಿಕಾರಿಗಳು ಬರೀ ಪೊಳ್ಳು ಭರವಸೆ ನಿಡುತ್ತಿದ್ದಾರೆ ಎಂದು ನಿವಾಸಿಗಳು ಅರೊಪಿಸಿದ್ದಾರೆ.
ರಸ್ತೆ ಅವ್ಯವಸ್ಥೆ: ಉಗ್ಗೆಹಳ್ಳಿಯ 197ನೇ ಸರ್ವೆ ನಂಬರಿನ ಜಾಗವು ಪಟ್ಟಣದಿಂದ 13 ಕಿಮೀ ದೂರವಿದೆ. ತಾಪಂ ಸದಸ್ಯ ಎ.ಜೆ. ಸುಬ್ರಾಯ ರಸ್ತೆ ದುರಸ್ತಿಪಡಿಸಿದ್ದರು. ಆದರೆ, ಮರಳು ಮಾಫಿಯದವರ ಅಕ್ರಮ ಮರಳು ಸಾಗಾಣಿಕೆಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಸಂಪರ್ಕವಿಲ್ಲ. ವಿದ್ಯುತ್ ಮತ್ತು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕುಡಿಯುವ ನೀರು ತರಲು 1 ಕಿಮೀ ದೂರ ಎಸ್ಟೇಟ್ನಲ್ಲಿ ನಡೆದು ಹೋಗಬೇಕು. ಎಸ್ಟೇಟಿನ ದಾರಿಯನ್ನು ಬಂದ್ ಮಾಡಿದ್ದು, ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.
ಪ್ಲಾಸ್ಟಿಕ್ನಲ್ಲಿ ಬಿಡಾರ: ತತ್ಕೊಳದಿಂದ ಹೊರಗೆ ಹಾಕಿದ ನಂತರ 50 ಸಾವಿರ ಪರಿಹಾರ ಮಾತ್ರ ನೀಡಿದ್ದಾರೆ. ಮನೆ ಕಟ್ಟಿಕೊಳ್ಳಲು 1 ಎಕರೆ ಜಾಗ ನೀಡಿತ್ತು. ತತ್ಕೊಳದಿಂದ ಮನೆಯ ಸಾಮಾನು ಸರಾಂಜಾಮು ಸಾಗಿಸಲು 15 ಸಾವಿರ ಖರ್ಚು ಮಾಡಿದ್ದಾರೆ.
ಮನೆಯ ಹಕ್ಕು ಪತ್ರ ಪಡೆಯಲು 20 ಸಾವಿರ ಖರ್ಚು ಮಾಡಿದ ನಿರಾಶ್ರಿತರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದ ಕಾರಣ 10 ಕುಟುಂಬಗಳು ಪ್ಲಾಸ್ಟಿಕ್ನಿಂದ ಬಿಡಾರ ನಿರ್ಮಿಸಿ ಜೀವನ ಸಾಗಿಸುತ್ತಿದ್ದಾರೆ.
ಹುಸಿಯಾದ ಭರವಸೆ: ನಿರಾಶ್ರಿತರ ಕುಟಂಬದಲ್ಲಿ ವಾಸಿಸುತ್ತಿರುವ ವೃದ್ಧೆ ಮಹಿಳೆ ಅಪ್ಪಿ ಪತ್ರಕರ್ತರೊಂದಿಗೆ ಮಾತನಾಡಿ, ವೋಟು ಕೇಳಲು ಬರುವ ರಾಜಕಾರಣಿಗಳು ಮೂಲ ಸೌಕಯ್ಯ ಒದಗಿಸುವ ಭರವಸೆ ನೀಡಿದ್ದಾರೆ. ವೋಟು ಪಡೆದ ನಂತರ ಅವರು ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ.
ಅರಣ್ಯಾಧಿಕಾರಿಗಳು ಭೇಟಿ ನೀಡಿ ಸೊಲಾರ್ ಲ್ಯಾಂಪ್ ಮತ್ತು ಅಸ್ತ್ರ ಒಲೆ ನೀಡುವುದಾಗಿ ಭರವಸೆ ನೀಡಿ ವರ್ಷಗಳೆ ಕಳೆದರೂ ಭರವಸೆಯಾಗಿಯೇ ಉಳಿದಿದೆ. ತಹಸೀಲ್ದಾರರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ವಾಹನಗಳು ಬರಲ್ಲ: ಅಕ್ಕಿ, ಸಕ್ಕರೆ, ಗೋದಿ, ಸೀಮೆಎಣ್ಣೆ ತರಲು ಮೂಡಿಗೆರೆಯಿಂದ 2 ಕಿಮೀ ದೂರವಿರುವ ಹೆಸಗಲ್ ಗ್ರಾಮದ ಸೊಸೈಟಿಯಿಂದ ತರಬೇಕು. ಯಾರಿಗಾದರೂ ಅನಾರೋಗ್ಯವಾದರೆ ಅವರನ್ನು ಕರೆ ತರಲು ಯಾವುದೇ ವಾಹನ ವ್ಯವಸ್ಥೆ ಇಲ್ಲ.
ಕಾರಣ ರಸ್ತೆ ಕಡಿದಾಗಿದೆ. ಯಾವ ವಾಹನಗಳು ಬರುವುದಿಲ್ಲ. ಮೂರ್ನಾಲ್ಕು ಕಿಮೀ ಹೊತ್ತುಕೊಂಡೆ ಸಾಗಬೇಕು. ಮಳೆ ಬಂದರೆ ನೀರೆಲ್ಲಾ ಮನೆಯೊಳಕ್ಕೆ ನುಗ್ಗುತ್ತದೆ. ಮರದ ಆಶ್ರಯ ಪಡೆದುಕೊಳ್ಳುವ ಪರಿಸ್ಥಿತಿ ಒದಗಿದೆ. ನಿರಾಶ್ರಿತರ ಬಗ್ಗೆ ಸರ್ಕಾರ ಕಣ್ಣೆತ್ತಿ ನೋಡದಿರುವುದು ದುರಂತದ ಸಂಗತಿ.