'ಲೋಕ ಅದಾಲತ್‌ನಲ್ಲಿ 1400 ಪ್ರಕರಣ ಇತ್ಯರ್ಥ'
ಚಿಕ್ಕಮಗಳೂರು: ಲೋಕ ಅದಾಲತ್ ಮೂಲಕ 2012-13ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 1400 ಕೇಸ್‌ಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಬಿ. ವಸ್ತ್ರಮಠ ಹೇಳಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಾರ್ತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಪೂರಕ ಕಟ್ಟಡದ ಸಭಾಂಗಣದಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್ ಹಾಗೂ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
1500 ಪ್ರಕರಣ ಇತ್ಯರ್ಥ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಬೃಹತ್ ಲೋಕ ಅದಾಲತ್‌ಅನ್ನು ಏಳು ದಿನಗಳ ಕಾಲ ನಡೆಸಲಾಗುತ್ತಿದೆ. ನ್ಯಾಯಾಲಯದ ಎಲ್ಲಾ ಸಿಬ್ಬಂದಿಗಳು ಏಳು ದಿನಗಳ ಕಾಲ ಈ ಅದಾಲತ್ ಕಾರ್ಯದಲ್ಲಿ ತೊಡಗಿಸಿಕೊಳ್ಳುವರು ಎಂದ ಅವರು, ಜಿಲ್ಲೆಯಲ್ಲಿ ಒಟ್ಟು 20 ಸಾವಿರ ಕೇಸುಗಳು ಬಾಕಿ ಇದ್ದು, ಮೆಗಾ ಅದಾಲತ್‌ನಲ್ಲಿ 1500 ಕೇಸ್‌ಗಳನ್ನು ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿದೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಕೇಸ್‌ಗಳ ಸಂಖ್ಯೆ ಕಡಿಮೆ ಇದೆ ಎಂದರು.
90 ಸಾವಿರ ಪ್ರಕರಣ: ಬೆಳಗಾವಿಯಲ್ಲಿ 90 ಸಾವಿರ, ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೇಸುಗಳು ಇತ್ಯರ್ಥವಾಗಬೇಕಿದೆ. ಲೋಕ ಅದಾಲತ್‌ನಲ್ಲಿ ಭಾಗವಹಿಸುವುದರಿಂದ ಜನರಿಗೆ ಸಮಯ, ಹಣ ಉಳಿತಾಯವಾಗುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುನಾಥ ನಾಯಕ್, ಭಾರತೀಯ ಪರಂಪರೆಯಾದ ವಿವಿಧತೆಯಲ್ಲಿ ಏಕತೆ ಮತ್ತು ಐಕ್ಯತೆಯ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಮಹದೇವಯ್ಯ ಸ್ವಾಗತಿಸಿದರು.
ಅಫ್ತಾಬ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ನ್ಯಾ. ಎಂ. ಕೋಮಲತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.