ಅಭಿವೃದ್ಧಿಗೆ ಅನುದಾನ ಬಿಡುಗಡೆ
ಕೊಪ್ಪ: ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಭಯ ಚಂದ್ರ ಜೈನ್ ಅವರ ಪ್ರಯತ್ನ ಮೇರೆಗೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಿಂದ ಅಡಕೆ, ಬತ್ತದ ಬೆಳೆ ನಾಶಕ್ಕೆ ಪರಿಹಾರ ನೀಡಲು ಮತ್ತು ಮನೆ, ರಸ್ತೆ ದುರಸ್ತಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ತಿಳಿಸಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ 41 ಮನೆಗಳಿಗೆ ಒಟ್ಟು. ರು. 4,39,000 ಹಣವನ್ನು ಹಾನಿಯ ಪ್ರಮಾಣಕ್ಕೆ ತಕ್ಕಂತೆ ವಿತರಿಸಲಾಗಿದೆ ಎಂದರು.
ರಸ್ತೆ ಪುನರ್ ನಿರ್ಮಾಣ: ತಾಲೂಕಿನ ಜಯಪುರ ಬಸ್ರೀಕಟ್ಟೆ, ಬಾಳೆಹೊಳೆ ರಸ್ತೆ ಅತಿವಷ್ಟಿಯಿಂದ ಹಾನಿಯಾದ ರಸ್ತೆಯ ಪುನರ್ ನಿರ್ಮಾಣಕ್ಕೆ ರು. 15 ಲಕ್ಷ ಬಿಡುಗಡೆಯಾಗಿದೆ. ಅತ್ತಿಕೂಡಿಗೆ ಗ್ರಾಪಂ ರಸ್ತೆ ನಿರ್ಮಾಣಕ್ಕೆ ರು. 14.50 ಲಕ್ಷ, ಶಾನುವಳ್ಳಿ ಗ್ರಾಪಂನ ಬಾಲನಕೊಪ್ಪ ಶೇಷಪ್ಪನವರ ಮನೆ ಸಮೀಪದ ಧರೆ ಕುಸಿತದ ತೆರವಿಗಾಗಿಯೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
10 ಎಕರೆ ಒಳಗಿನ ರೈತರ ಆಕ್ರಮ ಒತ್ತುವರಿಯನ್ನು ಖುಲ್ಲಾ ಮಾಡುವುದಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿಸಿದ ನಂತರ ಒತ್ತುವರಿದಾರ ಸಮಾಲೋಚನೆ ಮಾಡಿ ಒತ್ತುವರಿ ತೆರವು ಮಾಡಿಸುತ್ತೇವೆ ಎಂಬ ಮಾತಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಇದುವರೆಗೆ ಸಣ್ಣ ರೈತರ ಒತ್ತುವರಿ ತೆರವಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದರು.
ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಜಿ. ಶೋಭಿಂತ್, ಪಪಂ ಸದಸ್ಯ ಸುಬ್ರಮಣ್ಯ, ಮಾಲತಿ, ಕ್ಷೇತ್ರ ಯುತ್ ಕಾಂಗ್ರೆಸ್ ಅಧ್ಯಕ್ಷ ನವೀನ್, ನಗರಾಧ್ಯಕ್ಷ ಬರಕತ್ ಮೊದಲಾದವರು ಇದ್ದರು.