'ಕನ್ನಡ ಸಾಹಿತ್ಯದಲ್ಲಿ ಯಕ್ಷಸಾಹಿತ್ಯಕ್ಕೆ ಮನ್ನಣೆಯಿಲ್ಲ'
ಶೃಂಗೇರಿ: ದಾಸ ಸಾಹಿತ್ಯದ ಪ್ರಭಾವದಿಂದ ಹುಟ್ಟಿದ ಯಕ್ಷಕಲೆ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ಶ್ರೀಮಂತ ಕಲೆಯಾಗಿದೆ. ಆದರೆ, ಯಕ್ಷಸಾಹಿತ್ಯಕ್ಕೆ, ಯಕ್ಷಕವಿಗಳಿಗೆ ಸರಿಯಾದ ಮನ್ನಣೆ ದೊರೆತಿಲ್ಲ ಎಂದು ಮಂಗಳೂರಿನ ಯಕ್ಷಗಾನ ಕಲಾವಿದ ಶ್ರೀ ಡಿ.ಎಸ್. ಶ್ರೀಧರ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಮೆಣಸೆ ರಾಜೀವಗಾಂಧಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಯಕ್ಷಸಾಹಿತ್ಯಕ್ಕೆ ಕುಮಾರವ್ಯಾಸ, ಮುದ್ದಣರಂತಹ ಅನೇಕ ಕವಿಗಳು ಅಪಾರ ಕೊಡುಗೆ ನೀಡಿದ್ದರೂ ಅವರನ್ನು ಯಕ್ಷಕವಿಗಳೆಂದು ಗುರುತಿಸಲಾಗಿರುವುದು ದುರಂತವೇ ಸರಿ. ಸುಮಾರು 15 ಸಾವಿರಕ್ಕೂ ಅಧಿಕ ಯಕ್ಷಪದ್ಯ ರಚಿಸಿರುವ ತೀರ್ಥಹಳ್ಳಿ ಹಲಸಿಹಳ್ಳಿ ನರಸಿಂಹಶಾಸ್ತ್ರಿಯವರಂತಹ ಯಕ್ಷ ಕವಿಗಳನ್ನು ಸ್ಮರಿಸದಿರುವುದು ಇಂತಹ ಮಹಾನಿಯರಿಗೆ ಮಾಡಿದ ಅಪಮಾನವಾಗಿದೆ ಎಂದರು.
ಪ್ರಾದ್ಯಾಪಕ ರಾಮಚಂದ್ರ ಜೋಯಿಸ್, ಜ್ಯೋತಿಷ್ಯ ಪ್ರಾಧ್ಯಾಪಕ ರಾಮಕೃಷ್ಣ ಪೆಜೆತ್ತಾಯ, ಆಂಗ್ಲ ಪ್ರಾಧ್ಯಾಪಕ ವಿನಯ ಎಂ.ಎಸ್, ಕವಿತಾ ಮತ್ತಿತರರು ಉಪಸ್ಥಿತರಿದ್ದರು.