ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತಪ್ಪು ತಿದ್ದಕೊಳ್ಳುವುದೇ ನಾಗರಿಕ ಲಕ್ಷಣ

Lingaraj Badiger
Updated On : 26 Nov 2013, 10:49 am

ಚಿಕ್ಕಮಗಳೂರು: ಮನುಷ್ಯನಿಗೆ ಸಮಾಜದಲ್ಲಿ ಅಂತಸ್ತು, ಗೌರವ ಮತ್ತು ಸ್ಥಾನಮಾನ ದೊರೆಯಬೇಕಾದರೆ ಆತ ದುಶ್ಚಟಗಳನ್ನು ಬಿಟ್ಟು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ್ ಹೇಳಿದ್ದಾರೆ.
ನಗರದ ಲಯನ್ಸ್ ಸೇವಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ಒಂದು ವಾರ ಕಾಲದ ಮದ್ಯವರ್ಜನ ಶಿಬಿರದಲ್ಲಿ ಸೋಮವಾರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ತಪ್ಪು ತಿದ್ದಿಕೊಳ್ಳಿ: ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ, ಅದನ್ನು ತಿದ್ದಿಕೊಂಡು ನಡೆಯುವುದು ಉತ್ತಮ ನಾಗರಿಕನ ಲಕ್ಷಣ ಎಂದ ಅವರು, ಇದನ್ನು ಅರಿತು ಮನುಷ್ಯ ದುಶ್ಚಟಗಳನ್ನು ಬಿಟ್ಟು ತಾನು ಮಾಡಿದ ತಪ್ಪನ್ನು ತಿದ್ದಿಕೊಂಡು ನಡೆದರೆ ಉತ್ತಮ ನಾಗರಿಕನಾಗಿ ಬದುಕಬಹುದು ಎಂದರು.
ದುಷ್ಪರಿಣಾಮ: ಯಾವ ಪ್ರಾಣಿಗಳೂ ಸಹ ಮದ್ಯಪಾನ ಮಾಡುವುದಿಲ್ಲ. ತಂಬಾಕು ಸೇವಿಸುವುದಿಲ್ಲ, ವಿವೇಚನಾ ಶಕ್ತಿಯಿಲ್ಲದ ಪ್ರಾಣಿಗಳಿಗೇ ಇಲ್ಲದ ದುಶ್ಚಟ, ಬುದ್ದಿಶಕ್ತಿ ಇರುವ ಮನುಷ್ಯನಿಗೇಕೆ ಎಂದು ಪ್ರಶ್ನಿಸಿದ ಅವರು, ಮನುಷ್ಯ ತನ್ನ ಆರೋಗ್ಯದ ಬಗ್ಗೆ ಎಚ್ಚರ ಮತ್ತು ಕಾಳಜಿ ವಹಿಸಿ, ದುಶ್ಚಟಗಳಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು  ಅರಿತಾಗ ಅವುಗಳನ್ನು ಬಿಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಂಬಾಕು ಮದ್ಯಪಾನದಂತಹ ದುಶ್ಚಟಗಳಿಂದ ಸುಖ ದೊರೆಯುತ್ತದೆ ಎಂಬ ಭ್ರಮೆ ಸುಳ್ಳು. ವಾಸ್ತವವಾಗಿ ಅದು ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ದುಶ್ಚಟಗಳ ದಾಸರಾಗಿರುವ ಯುವಜನತೆ ಅದರಿಂದ ಹೊರಬಂದು ತಮ್ಮ ಜವಾಬ್ದಾರಿಯನ್ನು ಅರಿತು ನಡೆದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಲಯನ್ಸ್ ಅಧ್ಯಕ್ಷೆ ನೇತ್ರಾ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ, ವಾಣಿ ಚಂದ್ರಯ್ಯನಾಯ್ಡು, ಆಶಾಕಿರಣ ಅಂಧಮಕ್ಕಳ ಶಾಲೆಯ ನಿರ್ದೇಶಕ ಗಿರಿಧರ್ ಯತೀಶ್, ಸೈಯದ್ ಉಪಸ್ಥಿತರಿದ್ದರು. ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕೇಶವ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement