ದೇಶದ ವಿನಾಶಕ್ಕೆ ಮುಂದಾಗಿರುವ ಯುಪಿಎ
ಬಾಳೆಹೊನ್ನೂರು: ಕೇಂದ್ರ ಸರ್ಕಾರದ ಒಡೆದು ಆಳುವ ನೀತಿಯಿಂದ ದೇಶ ಇಂದು ವಿನಾಶದ ಅಂಚಿನಲ್ಲಿದ್ದು, ದೇಶದ ಪ್ರಗತಿ, ಸುರಕ್ಷೆ ಮತ್ತು ಆತ್ಮಗೌರವಕ್ಕಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯುವ ಜನತೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕರನ್ನು ಬೆಂಬಲಿಸಬೇಕು ಎಂದು ಮಂಗಳೂರು ನಮೋ ಬ್ರಿಗೇಡ್‌ನ ಪ್ರಮುಖ ಮಂಜಯ್ಯ ಜೈನ್ ಹೇಳಿದ್ದಾರೆ.
ಇಲ್ಲಿನ ಜೇಸಿ ವೃತ್ತದಲ್ಲಿ ಭಾನುವಾರ ಸಂಜೆ ನೂತನ ನಮೋ ಬ್ರಿಗೇಡ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿ, ಪ್ರಪಂಚದ ಎಲ್ಲಾ ದೇಶಗಳಿಗಿಂತಲೂ ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಬುದ್ಧಿವಂತಿಕೆಯಲ್ಲಿ ಮುಂದಿದೆ. ಆದರೆ, ಇಲ್ಲಿನ ನಮ್ಮನ್ನಾಳುವ ಸರ್ಕಾರಗಳು ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡದೆ ಅವರು ಮುನ್ನಡೆ ಸಾಧಿಸುತ್ತಿಲ್ಲ. ಆದರೆ, ಅಮೆರಿಕಾದಂತಹ ದೇಶವು ನಮ್ಮ ಬುದ್ಧಿಕೆಯಂತಿಕೆಯನ್ನು ಕೊಳ್ಳೆಹೊಡೆದು ವಿಶ್ವದ ದೊಡ್ಡಣ್ಣನೆನಿಸಿಕೊಂಡಿದೆ ಎಂದರು.
ಗುಜರಾತ್ ಅಭಿವೃದ್ಧಿ ರಾಜ್ಯ: ದೇಶದಲ್ಲಿ ಗುಜರಾತ್ ರಾಜ್ಯವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಮೋದಿ ಆಡಳಿತದ ಪರಿಣಾಮ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ. ಗುಜರಾತ್ ರಾಜ್ಯವು ಪಾಕಿಸ್ತಾನದ ಗಡಿಯಲ್ಲೇ ಇದ್ದರೂ ಸಹ ಅಲ್ಲಿ ಭಯೋತ್ಪಾದನೆಗೆ ಆಸ್ಪದವಿಲ್ಲ ಮತ್ತು 2002 ರ ನಂತರ ಅಲ್ಲಿ ಯಾವುದೇ ಕೋಮುಗಲಭೆಗಳು ನಡೆದಿಲ್ಲ ಎಂದ ಅವರು, ಜಾತೀಯತೆ ತೋರದೆ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಮನೋಭಾವನೆ ಮೋದಿಯವರಲ್ಲಿದೆ. ವಿಶ್ವದಲ್ಲಿ ಭಾರತ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಯುವಕರು ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಬೇಕು ಎಂದರು.
ಹಗರಣಗಳ ಗೂಡು ಯುಪಿಎ: ಕೊಪ್ಪ ನಮೋ ಬ್ರಿಗೇಡ್‌ನ ಪುಣ್ಯಪಾಲ್ ಮಾತನಾಡಿ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಹಗರಣಗಳ ಗೂಡಾಗಿದ್ದು, ದೇಶದ ಏಕತೆಗೆ ಮಾರಕವಾಗಿದೆ. ದೇಶವನ್ನು ನೈತಿಕ, ಸಾಂಸ್ಕೃತಿಕ ಹಾಗೂ ಆರ್ಥಿಕವಾಗಿ ದಿವಾಳಿತನದತ್ತ ತಳ್ಳಿದ ಸರ್ಕಾರ ಇದಾಗಿದೆ ಎಂದು ಆರೋಪಿಸಿದರು.
ಸ್ಥಳೀಯ ನಮೋ ಬ್ರಿಗೇಡ್ ಘಟಕದ ಅಧ್ಯಕ್ಷ ಬಿ.ವಿ. ದೀಪಕ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮೋ ಬ್ರಿಗೇಡ್ ಸಂಘಟನೆಯು ಯಾವುದೇ ರಾಜಕೀಯ ಪಕ್ಷದೊಂದಿಗೆ ವಿಲೀನವಾಗಿಲ್ಲ. ಸಮರ್ಥ ಹಾಗೂ ದಕ್ಷ ಆಡಳಿತ ನೀಡುವ ಮೋದಿಯವರ ನಾಯಕತ್ವನ್ನು ಬಯಸುವ ಸಂಘಟನೆ ಇದು ಎಂದು ಹೇಳಿದರು.
ನಮೋ ಬ್ರಿಗೇಡ್‌ನ ಬಿ.ಸಿ. ಸಂತೋಷ್‌ಕುಮಾರ್, ಎಂ.ಡಿ. ಪ್ರಕಾಶ್ ಮಾಗುಂಡಿ, ದಯಾಕರ್ ನಾ.ಸುವರ್ಣ, ಎಸ್.ಎಲ್. ಚೇತನ್ ಉಪಸ್ಥಿತರಿದ್ದರು.
ಸಭೆಗೂ ಮುನ್ನ 300 ಕ್ಕೂ ಅಧಿಕ ನಮೋ ಅಭಿಮಾನಿಗಳು ಮೋದಿ ಟೀ ಶರ್ಟ್, ಕ್ಯಾಪ್ ಹಾಗೂ ಮುಖವಾಡಗಳನ್ನು ಧರಿಸಿ ಇಲ್ಲಿನ ಭದ್ರಾ ಕಾಫಿ ಸ್ಟಾಪ್ ಬಳಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಕೊಪ್ಪ ರಸ್ತೆ, ರಂಭಾಪುರಿ ಮಠ, ಮಸೀದಿಕೆರೆ, ಕಡ್ಲೇಮಕ್ಕಿ ಭಾಗಗಳಲ್ಲಿ ಬೈಕ್ ಜಾಥಾ ನಡೆಸಿದರು.