ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಕ.ಪ್ರ.ವಾರ್ತೆ, ಶೃಂಗೇರಿ, ನ.25
ಇಲ್ಲಿ ನಿತ್ಯ ನೂರಾರು ವಾಹನ ಸಂಚರಿಸುತ್ತಿದ್ದರೂ, ಈ ರಸ್ತೆ ಡಾಂಬರೀಕರಣಗೊಳ್ಳದೇ ಹಲವು ವರ್ಷಗಳೇ ಕಳೆದಿವೆ. ಅಲ್ಲಲ್ಲಿ ಹೊಂಡಗುಂಡಿಗಳು ಇದ್ದು, ಜಲ್ಲಿಕಲ್ಲುಗಳು ಕಿತ್ತೆದ್ದಿವೆ. ಮಳೆಗಾಲದಲ್ಲಿ ಮಳೆಯ ನೀರೆಲ್ಲಾ ರಸ್ತೆಯ ಮೇಲೆಯೇ ಹರಿದಾಡುವುದರಿಂದ ಹೊಂಡಗುಂಡಿಗಳು ನೀರಿನಿಂದ ತುಂಬಿರುತ್ತದೆ. ಇದು ತೋರಣಗದ್ದೆ- ಮಾಣಿಬೈಲು ಸಂಪರ್ಕ ರಸ್ತೆಯ ದುಸ್ಥಿತಿ.
ಈ ರಸ್ತೆಯ ಮೇಲೆ ಸಂಚರಿಸುವುದೇ ದುಸ್ತರವಾಗಿದ್ದು, ಸರ್ಕಾರ ಕೂಡಲೇ ಇತ್ತ ಗಮನಹರಿಸಿ ರಸ್ತೆ ದುರಸ್ಥಿಪಡಿಸಬೇಕೆಂದು ತೋರಣಗದ್ದೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಲವು ಬಾರಿ ಮನವಿ: ಈ ಬಗ್ಗೆ ಈಗಾಗಲೇ ಹಲವು ಬಾರಿ ಮನವಿ ನೀಡಲಾಗಿದ್ದು, ಗ್ರಾಮಸಭೆ, ಜನಪ್ರತಿನಿಧಿ ಸಭೆಗಳಲ್ಲಿ ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ.
ಮರ್ಕಲ್ ಪಂಚಾಯಿತಿ ವ್ಯಾಪ್ತಿಗೆ ಸೇರುವ ಈ ಪ್ರದೇಶಗಳ ಸುತ್ತಮುತ್ತ ತೋರಣಗದ್ದೆ, ಯಡದಾಳು, ಹುಲುಗಾರು, ಯಡದಳ್ಳಿ, ದಿಂದೋಡಿ, ಹೆಕ್ತೂರು, ಕಡ್ತೋಡಿ, ಹೊಳೆಹೊದ್ದು, ಸುಂಕದಮಕ್ಕಿ ಸುತ್ತಮುತ್ತಲ 30 ಕ್ಕೂ ಅಧಿಕ ಕುಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರೂ, ಈ ರಸ್ತೆ ದುರಸ್ತಿಪಡಿಸದೇ ನಿರ್ಲಕ್ಷವಹಿಸುತ್ತಲೇ ಬರಲಾಗಿದೆ.
ಈ ರಸ್ತೆಯಲ್ಲಿ ಖಾಸಗಿ ವಾಹನ ಬಿಟ್ಟರೆ ಕಾಲ್ನಡಿಗೆಯೇ ಗತಿ. ಶಾಲಾ ಕಾಲೇಜು, ಆಸ್ಪತ್ರೆ ಇನ್ನಿತರ ಅಗತ್ಯ ಕೆಲಸಗಳಿಗೆ ದಿನನಿತ್ಯ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕು. ಇತ್ತೀಚಿನ ದಿನಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಖಾಸಗಿ ವಾಹನಗಳೂ ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗಿದೆ.
ಜ್ವಲಂತ ಸಮಸ್ಯೆ: ತೋರಣಗದ್ದೆ, ಯಡದಳ್ಳಿಯಲ್ಲಿ ಪರಿಶಿಷ್ಟ ಕಾಲೋನಿಗಳಿದ್ದು, ಇಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಯಡದಳ್ಳಿ ಕಾಲನಿ, ಸುಂಕದಮಕ್ಕಿ, ಹೆಕ್ತೂ ಸುತ್ತಮುತ್ತಲ ಗ್ರಾಮಗಳಿಗೆ ಈ ಮಾರ್ಗದ ಮೂಲಕವೇ ಸಂಚರಿಸಬೇಕು.
ಜಲ್ಲಿಕಲ್ಲು ರಸ್ತೆ ಬಿಟ್ಟರೆ ಮಣ್ಣು ರಸ್ತೆಯೇ ಗತಿ. ರಸ್ತೆ ಬದಲಾಗಿ ಹೊಂಡಗುಂಡಿಗಳಲ್ಲಿ ನೀರು ತುಂಬಿರುವುದರಿಂದ ಕೃಷಿ ಹೊಂಡಗಳಂತೆ ಕಾಣುತ್ತಿವೆ. ಇನ್ನು ಇದೇ ರೀತಿ ನಿರ್ಲಕ್ಷ ವಹಿಸಿದರೆ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಹೆಕ್ತೂರು ಸತೀಶ್, ದಿನೇಶ್ ತೋರಣಗದ್ದೆ, ಗಿಡ್ಡಯ್ಯ, ರಾಘವೇಂದ್ರ, ಅಣ್ಣಪ್ಪ, ಅನಿಲ, ಅಖಿಲೇಶ್, ಸವಿನಾ, ಉಮೇಶ್ ಒತ್ತಾಯಿಸುತ್ತಾರೆ.