ಅಡಕೆ ಕಳ್ಳತನ: ದೂರು
ಶೃಂಗೇರಿ: ತಾಲೂಕಿನ ಅಡ್ಡಗೆದ್ದೆ ಪಂಚಾಯಿತಿ ವ್ಯಾಪ್ತಿಯ ಕೆಳಕೊಪ್ಪ ಗ್ರಾಮದಲ್ಲಿ ರೈತರೊಬ್ಬರ ತೋಟದಲ್ಲಿ ಅಡಕೆ ಗೊನೆ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿದೆ. ಕೆ.ಎಸ್.ರಮೇಶ್ ಎಂಬುವವರ ತೋಟದಲ್ಲಿ ಕಳೆದೆರೆಡು ದಿನಗಳ ಹಿಂದೆ 1 ಸಾವಿರಕ್ಕೂ ಹೆಚ್ಚು ಅಡಕೆ ಗೊನೆಗಳನ್ನು ಕಳ್ಳತನ ಮಾಡಲಾಗಿದೆ. ಸುಮಾರು 1 ಲಕ್ಷ ಮೌಲ್ಯ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶೃಂಗೇರಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.
ಜನಸ್ಪಂದನ ಕಾರ್ಯಕ್ರಮ
ಚಿಕ್ಕಮಗಳೂರು: ಜಿಲ್ಲಾಡಳಿತ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದೊಂದಿಗೆ ವಸ್ತಾರೆ ಹೋಬಳಿಯ ಬಸ್ಕಲ್ ಗ್ರಾಮ ಪಂಚಾಯಿತಿಯ ಜನಸ್ಪಂದನ ಕಾರ್ಯಕ್ರಮ ಡಿಸೆಂಬರ್ 7 ರಂದು ಬೆಳಿಗ್ಗೆ 11 ಗಂಟೆಗೆ ಬಸ್ಕಲ್ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದರಿಂದ ಎಲ್ಲಾ ಸಮಸ್ತ ನಾಗರೀಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಹಕರಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.