ಎಂಇಎಸ್ ಶಾಸಕರ ಸದಸ್ಯತ್ವ ರದ್ದತಿಗೆ ಆಗ್ರಹ
ಕಡೂರು: ಬೆಳಗಾವಿ ಅಧಿವೇಶನದಲ್ಲಿ ಕನ್ನಡ ಭಾಷೆಗೆ ಕುಂದುಂಟು ಬರುವ ರೀತಿಯಲ್ಲಿ ನಡೆದುಕೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕರ ದುರ್ವತನೆ ಖಂಡಿಸಿ, ಸರ್ಕಾರವು ಈ ಶಾಸಕರ ಸದಸ್ಯತ್ವ ವಜಾ ಮಾಡಿ ಕನ್ನಡಿಗರ ಹಿತ ಕಾಪಾಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ಕುರುಬ ಸಮಾಜದ ಅಧ್ಯಕ್ಷ ರಮೇಶ್ ಮಾತನಾಡಿ, ಕರ್ನಾಟಕದ ರಾಜ್ಯದಲ್ಲಿದ್ದು ಕನ್ನಡಿಗರ ಸ್ವಾಭಿಮಾನ ಕೆಣಕುವ ರೀತಿಯಲ್ಲಿ ಅಧಿವೇಶನದಲ್ಲಿ 5 ಕೋಟಿ ಕನ್ನಡಿಗರ ಹಿತಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತನೆ ತೋರಿ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಎಂಇಎಸ್ ಶಾಸಕರ ಸದಸ್ಯತ್ವ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರೇಕಲ್ ಪ್ರಕಾಶ್ ಮತ್ತು ಮುಖಂಡ ಬೆಂಕಿ ಶೇಖರಪ್ಪ ಮಾತನಾಡಿದರು. ಕನ್ನಡ ಕಲಾ ಸಂಘದ ಅಧ್ಯಕ್ಷರೇವಣ್ಣಯ್ಯ, ಮಂಜುನಾಥಸ್ವಾಮಿ, ಶೇಖರಪ್ಪ, ತಾಕಸಾಪ ಅಧ್ಯಕ್ಷ ಶ್ರೀನಿವಾಸ್, ಶ್ರೀಕಂಠ ದತ್ತ ಒಡೆಯರ್, ಸುರೇಶ್, ಲೋಕೇಶ್, ಪ್ರಕಾಶ್, ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಮಹೇಶ್, ಮಂಜುನಾಥ್ ಪಾಲ್ಗೊಂಡಿದ್ದರು.