ಚಂದ್ರಶೇಖರಾನಂದ ಶ್ರೀ ನಿಧನಕ್ಕೆ ಶ್ರದ್ಧಾಂಜಲಿ
ತರೀಕೆರೆ: ಪಟ್ಟಣದ ಆರ್ಯವೈಶ್ಯ ಮಂಡಳಿ ವತಿಯಿಂದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸೋಮವಾರ ವಿಧಿವಶರಾದ ಆರ್ಯವೈಶ್ಯ ಶ್ರೀ ವಾಸವಿ ವಿದ್ಯಾ ಪೀಠದ ಶ್ರೀ ಚಂದ್ರಶೇಖರಾನಂದ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಏರ್ಪಡಿಸಲಾಗಿತ್ತು.
ಹಿರಿಯರಾದ ಅಜ್ಜಂಪುರ ಸತ್ಯನಾರಾಯಣ ಶ್ರೇಷ್ಠಿ ಅವರು ಮಾತನಾಡಿ, ಚಂದ್ರಶೇಖರಾನಂದ ಸ್ವಾಮೀಜಿ ಅವರು ಶ್ರೀ ವಾಸವಿ ಪೀಠದ ಪ್ರಥಮ ಸ್ವಾಮೀಜಿ ಆರ್ಯವೈಶ್ಯ ಕುಲಕ್ಕೆ ಗುರುಗಳ ಕೊರತೆಯನ್ನು ನೀಗಿಸಿದ್ದರು. ಮೂಢನಂಬಿಕೆಯನ್ನು ಹೋಗಲಾಡಿಸಿ ಸಮಾಜಕ್ಕೆ ಗುರುಬೋಧನೆ ಮಾಡಿದರು. ಭಗವಂತ ಮತ್ತು ಧಾರ್ಮಿಕ ತಿಳುವಳಿಕೆ ನೀಡಿ ನಿತ್ಯ ಗುರಿ ತಪಸ್ಸು ಮತ್ತು ಜನರಿಗೆ ಸನ್ಮಾರ್ಗ ತೋರಿಸುವುದೇ ಆಗಿತ್ತು ಎಂದರು. ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಶಾಂತಕುಮಾರ್ ಶ್ರೇಷ್ಠಿ ಅವರು ಸ್ವಾಮೀಜಿ ಅವರ ಜೀವನ ಕುರಿತು ಮಾತನಾಡಿ ವ್ಯಕ್ತಿಯನ್ನು ಸ್ಮರಿಸುವುದೇ ಕರ್ತವ್ಯ, ಗುರುವಿನ ಮುನ್ನುಡಿಯೇ ಸಾರ್ಥಕತೆ ಎಂದು ತಿಳಿಸಿದರು. ಆರ್ಯ ವೈಶ್ಯ ಮಂಡಳಿ ಸದಸ್ಯರು ಭಾಗವಹಿಸಿದ್ದರು.