ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದತ್ತಪೀಠ ಸುತ್ತ ಬೇಲಿ ಹಾಕಿದ್ದು ಖಂಡನಾರ್ಹ

Lingaraj Badiger
Updated On : 28 Nov 2013, 11:59 am

ಕಡೂರು: ಒಂದು ಸಮುದಾಯ ಓಲೈಸುವ ಸಲುವಾಗಿ ದತ್ತಪೀಠದ ಸುತ್ತ ಬೇಲಿ ಹಾಕಿಸಿ ಜನರಲ್ಲಿ ಭಯದ ವಾತಾವರಣ ಹುಟ್ಟು ಹಾಕಿರುವ ರಾಜ್ಯ ಸರ್ಕಾರದ ನಡವಳಿಕೆ ಖಂಡನಾರ್ಹ. ಸುಪ್ರೀಂ ಕೋರ್ಟ್‌ನಲ್ಲಿ ದತ್ತ ಪೀಠದ ಪರ ತೀರ್ಪು ಹೊರಬರಲಿದೆ ಎಂದು ಪ್ರಾಂತ ಸುರಕ್ಷಾ ಪ್ರಮುಖ್ ಪ್ರದೀಪ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ದತ್ತ ಪೀಠದ ವಿಚಾರದಲ್ಲಿ ರಾಜ್ಯ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆ. ಎರಡು ವಾರದ ಹಿಂದೆ ದತ್ತಪೀಠಕ್ಕೆ ದಾರಿ ಎಂದು ಇದ್ದ ಫಲಕಗಳನ್ನು ಬಾಬಾಬುಡನ್‌ಗಿರಿಗೆ ದಾರಿ ಎಂದು ಬದಲಾಯಿಸಲಾಗಿದೆ. ನಿಜವಾದ ಬಾಬಾಬುಡನ್ ಪೀಠ ಇರುವುದು ನಾಗೇನಹಳ್ಳಿಯಲ್ಲಿ. ಈ ಕುರಿತು ಆರ್‌ಎಸ್‌ಎಸ್ ಮುಖಂಡರಾದ ವಿಠಲರಾಯರು ದತ್ತಪೀಠ ಹಿಂದೂಗಳ ಶ್ರದ್ಧಾ ಕೇಂದ್ರ ಎಂದು ಸಾವಿರಾರು ದಾಖಲೆ ಸಂಗ್ರಹಿಸಿ ನ್ಯಾಯಾಲಯಕ್ಕೆ ನೀಡಿದ್ದಾರೆ ಎಂದರು.
ಸಬಲೀಕರಣ ಸಭೆ: ಈ ಬಾರಿಯ ದತ್ತಮಾಲೆ ಅಭಿಯಾನ ಹಾಗೂ ದತ್ತ ಜಯಂತಿಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ನ. 29 ರಂದು ಚಿಕ್ಕಮಗಳೂರಲ್ಲಿ ರಾಜ್ಯಮಟ್ಟದ ಸಬಲೀಕರಣ ಸಭೆ ನಡೆಯಲಿದೆ. ಡಿ 7ರಂದು ರಾಜ್ಯ ಸಂಚಾಲಕ ಸೂರ್ಯನಾರಾಯಣ ಮಾಲೆ ಧರಿಸುವ ಮೂಲಕ ದತ್ತಮಾಲೆಗೆ ಚಾಲನೆ ನೀಡಲಿದ್ದಾರೆ. ಡಿ 14ರಂದು ಪೀಠದಲ್ಲಿ ಅನಸೂಯಾದೇವಿ ಪೂಜೆ, ಗಣಪತಿ ಹೋಮ, ದುರ್ಗಾ ಹೋಮ, ಬೆಳಗ್ಗೆ 7.30ಕ್ಕೆ ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ಮತ್ತು ದತ್ತಪೀಠ ದರ್ಶನ ನಡೆಯಲಿದ್ದು, ಸುಮಾರು 5 ಸಾವಿರ ಮಹಿಳೆಯರು ಭಾಗವಹಿಸಲಿದ್ದಾರೆ. ಡಿ. 15ರಂದು ದತ್ತಪೀಠದಲ್ಲಿ ಗಣಪತಿ ಹೋಮ, ರುದ್ರಹೋಮ ನಡೆಯಲಿದೆ. ಆನಂತರ ಚಿಕ್ಕಮಗಳೂರು ನಗರದಲ್ಲಿ ದತ್ತಾತ್ರೇಯರವರ ಶೋಭಾಯಾತ್ರೆ ನಡೆಯಲಿದೆ. ಡಿ. 16 ರಂದು ದತ್ತಾತ್ರೇಯ ಜಯಂತಿ ಜರುಗಲಿದೆ. ಬೆಳಗ್ಗೆ 7.30ರಿಂದ ದತ್ತಪೀಠ ದರ್ಶನ ನಡೆಯಲಿದ್ದು, ಗಣಪತಿ ಹೋಮ, ದತ್ತ ಹೋಮ ಮತ್ತು ಧಾರ್ಮಿಕ ಸಭೆ ನಡೆಯಲಿದೆ ಎಂದರು.
ನ. 28ರಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ತರುಣ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಕಲ್ಲಡ್ಕ ಪ್ರಭಾಕರ್, ವಿಎಚ್‌ಪಿಯ ಕೇಶವ ಹಗೆಡೆ ಭಾಗವಹಿಸಲಿದ್ದು, ಕಡೂರಿನ ನೂತನ ಬಜರಂಗದಳ ಮತ್ತು ಆರ್‌ಎಸ್‌ಎಸ್ ಸಮಿತಿ ರಚಿಸಲಾಗುವುದು ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ಮಣಿ ಮಾತನಾಡಿದರು. ಪುರಸಭಾ ಸದಸ್ಯ ರಾಜೇಶ್, ಕೊಪ್ಪಲು ನಾಗರಾಜ್, ಮಹೇಶ್, ಸುರೇಶ್, ಆನಂದ್, ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement