ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಮಾದಕ ವ್ಯಸನ ವಿರುದ್ಧ ಮಕ್ಕಳಲ್ಲಿ ಜಾಗೃತಿ ಮೂಡಿಸಿ'

Lingaraj Badiger
Updated On : 28 Nov 2013, 12:04 pm

ಚಿಕ್ಕಮಗಳೂರು: ದುಶ್ಚಟಗಳಿಂದ ದೂರವಿರಲು ಜೀವನದಲ್ಲಿ ಲಕ್ಷ್ಮಣರೇಖೆ ಹಾಕಿಕೊಂಡು ಸಮಾಜಮುಖಿ ಕಾರ್ಯಗಳಿಗೆ ಕೈ ಜೋಡಿಸಿದರೆ ಎಲ್ಲರ ಸಹಕಾರ ಇರುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಬುಧವಾರ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಿರುದ್ಯೋಗ, ನಿರ್ಲಕ್ಷತೆ, ಶಿಕ್ಷಣದ ಅರಿವಿನ ಕೊರತೆ, ಬಡತನ ಮೊದಲಾದವುಗಳು ಕುಡಿತದ ದಾಸರಾಗಲು ಕಾರಣವಾಗಿದ್ದು, ಇದೊಂದು ಸಾಮಾಜಿಕ ಪಿಡುಗಾಗಿದೆ ಎಂದರು.
ಅಭಿವೃದ್ಧಿಗೆ ಅವಕಾಶ: ಕಡುಬಡವರು ಮತ್ತು ಮಧ್ಯಮ ವರ್ಗದವರು ಕುಡಿತದ ಹಾದಿ ಹಿಡಿದಿದ್ದಾರೆ. ಇದರಿಂದ ಯಾವುದೇ ಲಾಭವಿಲ್ಲ, ಜನರನ್ನು ಕುಡಿತದಿಂದ ದೂರವಿರಿಸಲು ಸರ್ಕಾರ ಹಲವು ಕಾನೂನುಗಳನ್ನು ತಂದು ಕಾರ್ಯಕ್ರಮಗಳನ್ನು ರೂಪಿಸಿದೆ, ಶಿಕ್ಷಣದ ಜೊತೆಗೆ ಉದ್ಯೋಗವನ್ನು ನೀಡಿ ಕುಟುಂಬ ಅಭಿವೃದ್ಧಿ ಹೊಂದಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಮದ್ಯ, ಗುಟ್ಕಾ, ಗಾಂಜಾ ಮೊದಲದ ಮಾದಕ ವಸ್ತುಗಳು ಸುಲಭವಾಗಿ ದೊರಕುತ್ತಿರುವುದರಿಂದ ಕೆಲವರಿಗೆ ಇವುಗಳು ಜೀವನದ ಅನಿವಾರ್ಯವಾಗಿದೆ, ಇಂತಹ ವಸ್ತುಗಳು ಸರಾಗವಾಗಿ ಸಿಗುತ್ತಿರುವುದರಿಂದಲೇ ವ್ಯಸನಗಳು ಹೆಚ್ಚಾಗಲು ಕಾರಣವಾಗಿದೆ. ಕೆಲ ಶ್ರೀಮಂತರಿಗೆ ಮದ್ಯದ ಕೂಟ ಅಂತಸ್ತಾಗಿದೆ, ಜನಸಾಮಾನ್ಯರೂ ಸಮಾಜದಲ್ಲಿ ದೊಡ್ಡವರೆನಿಸಿಕೊಳ್ಳಲು ಅದೇ ಹಾದಿ ಹಿಡಿದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ಮಕ್ಕಳಿಗೆ ಶಿಕ್ಷಣ ನೀಡಿ: ಮದ್ಯ ಸೇರಿದಂತೆ ಮಾದಕ ವ್ಯಸನಗಳನ್ನು ಬಿಟ್ಟು ಉತ್ತಮ ಸ್ನೇಹಿತರನ್ನು ಗಳಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದ ಅವರು, ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಅಧ್ಯಕ್ಷೆ ನೇತ್ರಾ ವೆಂಕಟೇಶ್ ಮಾತನಾಡಿ, ಮದ್ಯವ್ಯಸನಿಗಳನ್ನು ಸಮಾಜ ಹೀನಾಯವಾಗಿ ನೋಡುತ್ತಿರುವುದರಿಂದ ಸಮಾಜ ನಮ್ಮನ್ನು ಯಾವ ರೀತಿ ಕಾಣುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡು ವ್ಯಸನಿಗಳು ಹೊಸ ಜೀವನ ರೂಪಿಸಿಕೊಳ್ಳಬೇಕು. ಮದ್ಯ ವ್ಯಸನದಿಂದ ಅಪರಾಧಗಳು ಹೆಚ್ಚಾಗುತ್ತಿರುವುದು ವಿಷಾದನೀಯವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement