ರೈಲು ನಿಲುಗಡೆ: ಸಚಿವರ ಜತೆ ಚರ್ಚೆ
ಕಡೂರು: ಪಟ್ಟಣದಲ್ಲಿ ಜನಶತಾಬ್ದಿ, ಚಾಲುಕ್ಯ ಎಕ್ಸ್‌ಪ್ರೆಸ್ ವಿವಿಧ ರೈಲು ನಿಲುಗಡೆ ಹಾಗೂ ಈ ಹಿಂದೆ ಇದ್ದ ರೇಲ್ವೆ ಗೂಡ್ಸ್‌ಶೆಡ್‌ಅನ್ನು ಬಳ್ಳೇಕೆರೆ ಮತ್ತು ಚಿಕ್ಕಮಗಳೂರು ಎರಡೂ ಕಡೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ನ. 29ರಂದು ನಡೆಯಲಿರುವ ಸಭೆಯಲ್ಲಿ ಒತ್ತಾಯಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಚಿಕ್ಕಮಗಳೂರು ಉಡುಪಿ ಲೋಕಸಭಾ ಸಂಸದ ಜಯಪ್ರಕಾಶ್ ಹೆಗ್ಗಡೆ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಡೂರು- ಚಿಕ್ಕಮಗಳೂರು ರೇಲ್ವೆ ಕನಸು ನನಸಾಗಿರುವ ಬೆನ್ನಲ್ಲೇ ಚಿಕ್ಕಮಗಳೂರು ಸಕಲೇಶಪುರ ರೈಲು ಮಾರ್ಗ ನಿರ್ಮಾಣದ ಕಾಮಗಾರಿಗೆ ಬಜೆಟ್‌ನಲ್ಲಿ ಸೇರಿಸಲಾಗಿದೆ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಭೂಸ್ವಾಧೀನಕ್ಕೆ ಹಾಸನ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ರೈಲುಗಳ ನಿಲುಗಡೆಗೆ ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ 5 ಕೋಚುಗಳ ನೇರ ಜೋಡಣೆ ಮಾಡಿಸುವುದನ್ನು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಗೂಡ್ಸ್‌ಶೆಡ್ ನಿರ್ಮಾಣ: ಬಳ್ಳೇಕೆರೆ ಮತ್ತು ಚಿಕ್ಕಮಗಳೂರು ಎರಡೂ ಕಡೆ ರೇಲ್ವೆ ಗೂಡ್ಸ್‌ಶೆಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವತೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ರೈತರ ತೆಂಗು ಬೆಳೆಯಿಂದ ನಷ್ಟಕ್ಕೀಡಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರಿಗೆ ಮನವಿ ಮಾಡಲಾಗಿದೆ. ಕೇರಳದ ಮಾದರಿ ರೀತಿಯಲ್ಲಿ ಕರ್ನಾಟಕದ ರೈತರಿಗೆ ಪ್ಯಾಕೇಜ್ ನೀಡುವಂತೆ ಕೋರಲಾಗಿದೆ. ಅದೇ ರೀತಿ ಕೊಳೆ ರೋಗಕ್ಕೆ ಸಂಬಂಧಿಸಿದಂತೆ ಈಗಾಗಲೇ 45 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಖರೀದಿ ಕೇಂದ್ರ: ಕಾಂಗ್ರೆಸ್ ಜಿಲ್ಲಾ ಮಾಧ್ಯಮ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿ, 145 ಕೋಟಿ ಹೆಬ್ಬೆ ಯೋಜನೆಗೆ 48 ಕೋಟಿ ಅನುದಾನ ನೀಡಿದೆ.
ಭದ್ರಾ ಮೇಲ್ದಂಡೆ ಯೋಜನೆಯಿಂದ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಭಾಗಗಳಿಗೆ ನೀರೊದಗಿಸುವ ಕಡೂರು ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಮೆಕ್ಕೆಜೋಳಕ್ಕೆ 1310 ಬೆಂಬಲ ಬೆಲೆ ನೀಡಿದ್ದು, ಕಡೂರಿನಲ್ಲಿ ಖರೀದಿ ಕೇಂದ್ರ ಆರಂಭವಾಗಲಿದೆ ಎಂದರು.
ಪುರಸಭಾ ಸದಸ್ಯರಾದ ಎಂ. ಸೋಮಶೇಖರ್, ರೇಣುಕಾರಾಧ್ಯ, ಖಾದರ್,ಬಳ್ಳೇಕೆರೆ ವಿಶ್ವನಾಥ್, ಬಾಸೂರು ಚಂದ್ರಮೌಳಿ, ಮುಖಂಡರಾದ ಕೆ.ಎಸ್. ಆನಂದ್, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.