ಹೊಂಡ, ಗುಂಡಿ ನಡುವೆ ರಸ್ತೆ ಮಾಯ
ನರಸಿಂಹರಾಜಪುರ: ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಟ್ಟೇಸರ-ಮಡೋಡಿ ರಸ್ತೆ ಹಾಗೂ ತಟ್ಟೇಸರ-ದಾವಣ ರಸ್ತೆಯು ಹೊಂಡ ಗುಂಡಿಗಳಿಂದ ಕೂಡಿದ್ದು ಕಳೆದ 10 ವರ್ಷಗಳಿಂದ ಈ ರಸ್ತೆಗಳು ದುರಸ್ತಿಯನ್ನೇ ಕಂಡಿಲ್ಲ. ಜನಪ್ರತಿನಿಧಿಗಳಿಗೂ ಈ ಬಗ್ಗೆ ಕಾಳಜಿ ಇದ್ದಂತಿಲ್ಲ.
ಜಿಲ್ಲಾ ಪಂಚಾಯ್ತಿಗೆ ಸೇರಿದ ತಟ್ಟೇಸರ-ಮಡೋಡಿ ರಸ್ತೆಯು 5 ಕಿ.ಮೀ.ದೂರವಿದ್ದು ತಟ್ಟೇಸರ ಹರಿಜನ ಕಾಲೋನಿ, ಕೆಳ ಕಟ್ಟಿನಮನೆ, ಅವತಿ ಕೆರೆ,ಮಡೋಡಿ ಹರಿಜನ ಕಾಲೋನಿ ಸೇರಲಿದೆ. ಈ ರಸ್ತೆಯಲ್ಲಿ ಕಟ್ಟಿನ ಮನೆ ಪ್ರೌಢ ಶಾಲೆಗೆ ಹೋಗುವ ಮಕ್ಕಳು, ಕೊಪ್ಪ, ನ.ರಾ.ಪುರ. ಬಾಳೆಹೊನ್ನೂರು ಶಾಲೆಗೆ ಹೋಗುವ ನೂರಾರು ಮಕ್ಕಳು ಪ್ರಯಾಣಿಸಬೇಕಾಗಿದೆ.
ಗುಂಡಿಗಳದ್ದೇ ಸಾಮ್ರಾಜ್ಯ: ಅಲ್ಲದೆ ಗ್ರಾಮಸ್ಥರು ಬಸ್ಸಿಗೆ ಬರಬೇಕಾದರೂ 5 ಕಿ.ಮೀ. ವ್ಯಾಪ್ತಿಯ ಈ ರಸ್ತೆಯಲ್ಲೇ ಬರಬೇಕಾಗಿದೆ. ಕಳೆದ 10 ವರ್ಷ ಹಿಂದೆ ಸಣ್ಣ ಸೇತುವೆ, ರಸ್ತೆಗೆ ಜಲ್ಲಿ ಹಾಗೂ ಕೆಲವು ಮೋರಿಗಳನ್ನು ಮಾಡಲಾಗಿತ್ತು. ಕೆಲವು ವರ್ಷಗಳ ನಂತರ ಜಲ್ಲಿ ಕಿತ್ತುಹೋಗಿ ಹೊಂಡ ಗುಂಡಿಗಳದ್ದೇ ಸಾಮ್ರಾಜ್ಯವಾಗಿದೆ. ರಸ್ತೆ ದುರಸ್ತಿ ಮಾಡಿಕೊಡುವಂತೆ ಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿ ನೀಡಲಾಗಿತ್ತು. ತಹಶೀಲ್ದಾರ್ ಭರವಸೆ ನೀಡಿದ್ದರು. ಆದರೂ ರಸ್ತೆ ದುರಸ್ತಿಯಾಗಿಲ್ಲ.
ಶಾಸಕರಿಗೆ ಮತ್ತು ಇತರ ಜನಪ್ರತಿನಿಧಿಗಲಿಗೆ ಹಲವು ಬಾರಿ ಮನವಿ ಮಾಡಿದರೂ ಈ ರಸ್ತೆಗೆ ಕಾಯಕಲ್ಪ ಆಗಿಲ್ಲ. ಈ ವರ್ಷ ಗ್ರಾಮಸ್ಥರೇ ಸೇರಿ ಕೆಲವು ಹೊಂಡಗಳಿಗೆ ಮಣ್ಣುಗಳನ್ನು ತುಂಬಿಸಿ ತಾತ್ಕಾಲಿಕ ದುರಸ್ತಿ ಮಾಡಿಸಿದ್ದಾರೆ. ಈ ರಸ್ತೆಗೆ ಜಲ್ಲಿ ಮತ್ತು ಡಾಂಬರೀಕರಣ ಮಾಡಿಸಿಕೊಡಿ ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಟ್ಟೇಸರ-ದಾವಣ ರಸ್ತೆ: ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಿಲ್ಲಾ ಪಂಚಾಯ್ತಿಗೆ ಸೇರಿದ 3 ಕಿ.ಮೀ. ವ್ಯಾಪ್ತಿಯ ತಟ್ಟೇಸರ-ದಾವಣ ರಸ್ತೆಗೆ ಅಲ್ಲಲ್ಲಿ 100 ಮೀಟರ್ ಮಾತ್ರ ಟಾರು ಹಾಕಿದ್ದರೂ ಟಾರು ಕಿತ್ತು ಹೋಗಿದೆ. ಉಳಿದ ರಸ್ತೆಯಲ್ಲಿ ಜಲ್ಲಿಗಳು ಕಿತ್ತು ಹೋಗಿದ್ದು ಹೊಂಡಗಳಾಗಿದೆ. ಹರಾವರಿ ಮತ್ತು ದಾವಣ ಗ್ರಾಮಗಳಲ್ಲಿ ಹಾದು ಹೋಗುವ ಈ ರಸ್ತೆಯು ಕಲ್ಲೂರು, ದಾವಣ, ಅರಗುಡಿಗೆ, ತಟ್ಟೇಸರ ಕೆಳಗಿನ ಕಾಲೋನಿಗಳು ಬರಲಿದೆ. ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಢಿಗ್ರಾಮ ಸಡಕ್ ಯೋಜನೆ ಸೂಕ್ತ: ಈ ಎರಡೂ ರಸ್ತೆಗಳು ಕಟ್ಟಿನಮನೆ ಸಮೀಪದ ತಟ್ಟೇಸರದ ಮುಖ್ಯ ರಸ್ತೆಯಿಂದಲೇ ಪ್ರಾರಂಭವಾಗಲಿದೆ. ತಟ್ಟೇಸರ-ದಾವಣ ರಸ್ತೆಯು 3 ಕಿ.ಮೀ.ದೂರದ ನಂತರ ಗುಡ್ಡೇಹಳ್ಳ- 8 ನೇ ಮೈಲಿಕಲ್ಲಿನ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆಗೆ ಸೇರುತ್ತದೆ. ಮತ್ತೊಂದು ಗ್ರಾಮೀಣ ರಸ್ತೆಯಾದ ತಟ್ಟೇಸರ-ಮಡೋಡಿ ರಸ್ತೆಯು ಕೊನೆಯಲ್ಲಿ ಮಡೋಡಿ ಸೇರುತ್ತದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಈ ಎರಡೂ ರಸ್ತೆಗಳನ್ನು ಒಟ್ಟಿಗೆ ಸೇರಿಸಿದರೆ 8 ಕಿ.ಮೀ.ಉದ್ದದ ಅತ್ಯುತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬಹುದಾಗಿದೆ. ಕ್ಷೇತ್ರದ ಶಾಸಕರು ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರು ಗಮನ ಹರಿಸಿ ಎರಡೂ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೇರಿಸಿ ಒಂದೇ ರಸ್ತೆಯ ಯೋಜನೆಯನ್ನಾಗಿ ಮಾಡಿ ಈ ರಸ್ತೆಗೆ ಕಾಯಕಲ್ಪ ನೀಡಬೇಕು ಎಂದು ಗ್ರಾಮಸ್ಥರ ಒತ್ತಾಯ.