'ಆಂಗ್ಲ ವ್ಯಾಮೋಹದಿಂದ ಹೊರ ಬನ್ನಿ'
ಚಿಕ್ಕಮಗಳೂರು: ಸಾಮೂಹಿಕವಾಗಿ ರಕ್ತದಾನ ಮಾಡುವ ಮೂಲಕ ಶ್ರೀ ಬೋಳರಾಮೇಶ್ವರ ಯುವಕ ಸಂಘದ ಕಾರ್ಯಕರ್ತರು ನಗರದಲ್ಲಿ ಗುರುವಾರ ಸಂಘದ ಮೊದಲ ದಿನದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿದರು.
ಶ್ರೀ ಬೋಳರಾಮೇಶ್ವರ ವೃತ್ತದ ಬಳಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಕನ್ನಡಿಗರು ಆಂಗ್ಲ ಭಾಷೆಯ ವ್ಯಾಮೋಹದಿಂದ ಹೊರಬಂದು ತಮ್ಮ ಬದುಕಿನಲ್ಲಿ ಮಾತೃ ಭಾಷೆಗೆ ಆದ್ಯತೆ ನೀಡಬೇಕು. ನಾಡಿನ ನೆಲ, ಜಲ ಮತ್ತು ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಕನ್ನಡಿಗರು ಜಾಗೃತರಾಗಿ: ಸಂಘದ ಅಧ್ಯಕ್ಷ ಸಿ.ಆರ್. ಬಾಲರಾಜ್ಗೌಡ ಮಾತನಾಡಿ, ಕನ್ನಡಿಗರು ಜಾಗೃತರಾಗಿ ಸ್ವಾಭಿಮಾನ ಬೆಳೆಸಿಕೊಂಡು ಕನ್ನಡತನವನ್ನು ಪ್ರದರ್ಶಿಸದಿದ್ದಲ್ಲಿ ನಾಡು- ನುಡಿ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯೋತ್ಸವದ ಪ್ರಯುಕ್ತ ನಗರ ಹೊರವಲಯದ ಜೀವನಸಂಧ್ಯಾ ವೃದ್ಧಾಶ್ರಮದ ನಿವಾಸಿಗಳಿಗೆ ಶುಕ್ರವಾರ ಬೆಳಿಗ್ಗೆ ಸಂಘದ ವತಿಯಿಂದ ಉಪಹಾರ ನೀಡಲಾಗುವುದು. ಶನಿವಾರ ಸಂಜೆ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ನಂತರ ಜಿಲ್ಲಾಸ್ಪತ್ರೆಗೆ ತೆರಳಿದ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಾಮೂಹಿಕವಾಗಿ ರಕ್ತದಾನ ಮಾಡಿದರು. ಸಂಘದ ಗೌರವಾಧ್ಯಕ್ಷ ಡಿ. ಗೋವಿಂದಪ್ಪ, ಉಪಾಧ್ಯಕ್ಷ ನಿಶಾಂತ್ ಗೌಡ, ಕಾರ್ಯದರ್ಶಿ ಸಿ.ಆರ್. ಶ್ರೀಧರ್, ಖಜಾಂಚಿ ಸುಬ್ರಹ್ಮಣ್ಯಸ್ವಾಮಿ, ಸಿಡಿಎ ಮಾಜಿ ಸದಸ್ಯ ಮಧುಕುಮಾರ್ ರಾಜ್ ಅರಸ್, ಭರತ್, ಮೋಹನ್ ಕುಮಾರ್ ಉಪಸ್ಥಿತರಿದ್ದರು.