'ಎಂಇಎಸ್ ಶಾಸಕರ ಸದಸ್ಯತ್ವ ರದ್ದು ಮಾಡಿ'
ಕಡೂರು: ಬೆಳಗಾವಿ ಅಧಿವೇಶನದಲ್ಲಿ ಕನ್ನಡ ಭಾಷೆಗೆ ಕುಂದುಂಟು ಬರುವ ರೀತಿಯಲ್ಲಿ ನಡೆದುಕೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕರಾದ ಸಂಭಾಜಿ ಹಾಗೂ ಮತ್ತೋರ್ವ ಶಾಸಕರ ದುರ್ವತನೆ ಖಂಡಿಸಿ ರಾಜ್ಯ ಸರ್ಕಾರವು ಈ ಶಾಸಕರ ಸದಸ್ಯತ್ವ ವಜಾ ಮಾಡಿ ಕನ್ನಡಿಗರ ಹಿತ ಕಾಪಾಡಬೇಕು ಎಂದು ಆಗ್ರಹಿಸಿ ಕಡೂರು ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹಾಗು ಜೆಡಿಎಸ್ ಮುಖಂಡ ಕೆ.ಎಸ್.ರಮೇಶ್ ಮಾತನಾಡಿ, ಕರ್ನಾಟಕದ ರಾಜ್ಯದಲ್ಲಿದ್ದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ರೀತಿಯಲ್ಲಿ ಅಧಿವೇಶನದಲ್ಲಿ 5ಕೋಟಿ ಕನ್ನಡಿಗರ ಹಿತಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತನೆ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಶಾಸಕರಾದ ಸಂಭಾಜಿ ಹಾಗು ಇನ್ನೋರ್ವ ಶಾಸಕರ ಸದಸ್ಯತ್ವ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಮುಖಂಡ ಅರೇಕಲ್ ಪ್ರಕಾಶ್ ಹಾಗು ಮುಖಂಡ ಬೆಂಕಿ ಶೇಖರಪ್ಪ ಮಾತನಾಡಿ, ಮರಾಠಿ ಶಾಸಕರ ಸದಸ್ಯತ್ವವನ್ನು ಕೂಡಲೇ ರಾಜ್ಯ ಸರ್ಕಾರವು ಕೂಡಲೇ ರದ್ದು ಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕನ್ನಡಕಲಾ ಸಂಘದ ಅಧ್ಯಕ್ಷ ಪಿ.ಕೆ. ರೇವಣ್ಣಯ್ಯ ಹಾಗು ಉಪಾಧ್ಯಕ್ಷ ಜಿ.ವಿ. ಮಂಜುನಾಥ ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದ ಇಬ್ಬಗೆ ನೀತಿಯಿಂದ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಅಧಿಕಾರವನ್ನು ಪ್ರಶ್ನಿಸುವ ಮಟ್ಟಕ್ಕೆ ಎಂಇಎಸ್ ಶಾಸಕರು ಹೋಗಿದ್ದಾರೆ. ಈ ಬಗ್ಗೆ ಮುಕ್ಯಮಂತ್ರಿ ಅಳರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬೆಂಕಿ ಶೇಖರಪ್ಪ, ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಮತಿಘಟ್ಟ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀಕಂಠ ದತ್ತ ಒಡೆಯರ್,ಮುಖಂಡರಾದ ಸುರೇಶ್,ಲೋಕೇಶ್,ಕೆ.ಜಿ.ಲೋಕೇಶ್, ಪ್ರಕಾಶ್,ಕೃಷ್ಣಮೂರ್ತಿ, ಮಾಜಿ ಎಪಿಎಂಸಿ ಅಧ್ಯಕ್ಷ ಮಹೇಶ್,ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
--