ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ
ಚಿಕ್ಕಮಗಳೂರು: ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಮಾನವನಲ್ಲಿ ಅಂತರ್ಗತವಾಗಿ ಬರುವ ಪ್ರತಿಭೆಯನ್ನು ಸ್ವಯಂ ಕೃಷಿ ಮೂಲಕ ಹೊರಹೊಮ್ಮಿಸುವ ಕಲಾ ಪ್ರಕಾರಗಳಲ್ಲಿ ಸಾಹಿತ್ಯವೂ ಒಂದಾಗಿದೆ. ಆಧುನಿಕವಾಗಿ ಅವಲೋಕಿಸಿದಾಗ ಎಲ್ಲಾ ವರ್ಗದಲ್ಲೂ ಸಾಹಿತ್ಯ ರಚನೆ ಯಥೇಚ್ಛವಾಗಿ ಸೃಷ್ಟಿಯಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದ್ದಾರೆ.
ಇತೀಚೆಗೆ ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ನಗರದ ಯುರೇಕಾ ಅಕಾಡೆಮಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಯಾನಂದ್ರವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯರಲ್ಲಿ ಒಳ್ಳೆಯ ವಿಚಾರ ಇದ್ದರೆ ಸಾಲದು, ಅವರು ಆ ವಿಚಾರವನ್ನು ಕೆಲಸದಲ್ಲಿ ತರ್ಜುಮೆ ಮಾಡಬೇಕು. ಒಳ್ಳೆಯ ವಿಚಾರಗಳನ್ನು ಕೆಲಸಕ್ಕೆ ಹಚ್ಚದೇ ಹೋದರೆ, ಅವು ಒಳ್ಳೆಯ ಕನಸುಗಳಂತೆ ವ್ಯರ್ಥವೆನಿಸುತ್ತವೆ. ತಾನು ಮಾಡುವ ವಿಚಾರವನ್ನು ಮನುಷ್ಯನು ಕಾರ್ಯರೂಪಕ್ಕೆ ತರಬೇಕು. ಶ್ರೇಷ್ಠ ಜ್ಞಾನವು ಮನುಷ್ಯನ ಶ್ರೇಷ್ಠತೆಯನ್ನು ತೋರಿಸಲು ಕಾರಣವೆನಿಸಬೇಕು. ಆ ನಿಟ್ಟಿನಲ್ಲಿ ದಯಾನಂದ್ರವರು ಈ ಎಲ್ಲಾ ಉತ್ತಮತೆಯನ್ನು ಉಳಿಸಿಕೊಂಡು ವೃತ್ತಿ ಬದುಕಿನಲ್ಲಿ ಉನ್ನತಿ ಗಳಿಸಿದ್ದಾರೆ ಎಂದು ತಿಳಿಸಿದರು.
ಸಾಧಕರಾಗಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಪ್ರಾಂಶುಪಾಲರಾದ ದೀಪಕ್ ದೊಡ್ಡಯ್ಯ ಮಾತನಾಡಿ, ಮನುಷ್ಯನ ಜೀವನ ಭಗವಂತ ನಮಗೆ ಕೊಟ್ಟ ಅಮೂಲ್ಯ ವರದಾನ, ಅದನ್ನು ಸಾರ್ಥಕವಾಗಿ ಬದುಕಬೇಕು ಎನ್ನುವುದೇ ಇವರ ಬಯಕೆಯಾಗಿರುತ್ತದೆ. ಹೀಗೆ ಬದುಕನ್ನು ಸಾರ್ಥಕಗೊಳಿಸುವ ಉದ್ದೇಶದಿಂದಲೇ ಇವರು ಏನನ್ನಾದರು ಸಾಧಿಸುವ ಪ್ರೇರಣೆ ಹೊಂದಿರುತ್ತಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ ಮಾತನಾಡಿ, ನಾವು ಮಾಡುವ ಕೆಲಸಗಳಲ್ಲಿ ನಾವು ಆನಂದ ಪಡೆಯಲು ಸಾಧ್ಯವಾದರೆ ನಾವು ಸಮಸ್ಯೆಗಳಿಂದ ಮೇಲಕ್ಕೇರಬಹುದು ಬದುಕಿನಲ್ಲಿ ಸುಲಭವಾಗಿ ಮುನ್ನಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಸಂಗೀತ ಗಂಗಾ ಕಾರ್ಯದರ್ಶಿ ಮಂಜುನಾಥ್ ಕಾಮತ್, ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರಿನಿವಾಸ, ಕಾರ್ಯದರ್ಶಿ ಸೂರಿ ಪ್ರಭು ಭಾಗವಹಿಸಿದ್ದರು.