ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಸ್‌ಪಿ ಧರಣಿ

Lingaraj Badiger
Updated On : 29 Nov 2013, 10:33 am

ಚಿಕ್ಕಮಗಳೂರು: ಭೂ ರಹಿತರಿಗೆ ಭೂ ಹಂಚಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಎಸ್ಪಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರದಿಂದ ಧರಣಿಯನ್ನು ಆರಂಭಿಸಿತು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಅವರ ನೇತೃತ್ವದಲ್ಲಿ ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಆರಂಭಿಸಲಾಯಿತು.
ಕಳೆದ 63 ವರ್ಷಗಳಿಂದ ನಮ್ಮನ್ನು ಆಳುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಇತರೆ ಪಕ್ಷಗಳ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಈವರೆಗೆ ಈಡೇರಿಸಿಲ್ಲ. ದೇಶದ ಕೃಷಿ ಭೂಮಿಯ ಹಂಚಿಕೆ ಇಂದಿಗೂ ಅಸಮಾನತೆಯಿಂದ ಕೂಡಿದೆ.
 70ರ ದಶಕದಲ್ಲಿ ಸರ್ಕಾರ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ ಕೃಷಿ ಕಾರ್ಮಿಕರಿಗೆ ಭೂ ಮಾಲೀಕನಾಗುವ ಅವಕಾಶ ಕಲ್ಪಿಸಿತು. ಆದರೆ, ಕಾನೂನು ತೊಡಕು, ನ್ಯಾಯ ವಿಳಂಬನೆ, ಭ್ರಷ್ಟ ಆಡಳಿತ ವ್ಯವಸ್ಥೆ ಮತ್ತು ಸ್ವಾರ್ಥ ರಾಜಕಾರಣದಿಂದಾಗಿ ಈ ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸಾಗುವಳಿ ಪತ್ರ ನೀಡಿ: ರಾಜ್ಯ ಸರ್ಕಾರ ಕೂಡಲೇ ವಿ. ಬಾಲಸುಬ್ರಹ್ಮಣ್ಯನ್ ಸಮಿತಿ ವರದಿಯನ್ನು ಒಪ್ಪಿಕೊಳ್ಳಬೇಕು. ಇದರಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ, ಹಿಂದುಳಿದ ಜಾತಿಗಳು ಮತ್ತು ಭೂ ರಹಿತರು ಮಾಡಿಕೊಂಡಿರುವ 50, 53ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಭೂಮಿಯನ್ನು ಸಕ್ರಮಗೊಳಿಸಿ, ಸಾಗುವಳಿ ಪತ್ರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ದೊಡ್ಡ ಭೂ ಮಾಲೀಕರು, ದೊಡ್ಡ ಪ್ಲಾಂಟರ್‌ಗಳು ಮತ್ತು ರಿಯಲ್ ಎಸ್ಟೇಟ್ ಭೂ ಮಾಫಿಯಾಗಳು ರಾಜ್ಯಾದ್ಯಂತ ಅಕ್ರಮವಾಗಿ ಕಬಳಿಸಿರುವ ಭೂಮಿಯನ್ನು ಸರ್ಕಾರ ತಕ್ಷಣ ವಶಕ್ಕೆ ತೆಗೆದುಕೊಂಡು ಭೂ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಬೇಕು. ಹೆಚ್ಚುವರಿ ಭೂಮಿ ಹೊಂದಿರುವವರಿಂದ ಭೂಮಿಯನ್ನು ವಶಕ್ಕೆ ತೆಗೆದುಕೊಂಡು ಬಡವರಿಗೆ ಹಂಚಿಕೆ ಮಾಡಬೇಕು. ಭೂ ನ್ಯಾಯ ಮಂಡಳಿಗಳನ್ನು ರಚನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಎಸ್ಪಿ ಮುಖಂಡರಾದ ಬಸವರಾಜ್, ಪಿ. ವೇಲಾಯುದನ್ ಹಾಗೂ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ  ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement