ಹಾಸ್ಟೆಲ್ ಕೊರತೆ ನೀಗಿಸಲು ಪ್ರಸ್ತಾವನೆ
ಚಿಕ್ಕಮಗಳೂರು: ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಇದರ ಸದ್ಬಳಕೆಯೊಂದಿಗೆ ಶೈಕ್ಷಣಿಕ ಪ್ರಗತಿ ಆಗಬೇಕೆಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶೃಂಗೇರಿ ಶಿವಣ್ಣ ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ನಿಲಯ ಪಾಲಕರು ಹಾಗೂ ಅಡುಗೆ ಸಿಬ್ಬಂದಿಗಳ ತರಬೇತಿ ಕಾರ್ಯಾಗಾರ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚಿನ ಅನುದಾನ ನೀಡುತ್ತಿದ್ದು, ಇದರ ಸದುಪಯೋಗವಾಗಲು ವಸತಿ ನಿಲಯಗಳ ಪಾಲಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಿ ಉತ್ತಮ ವಿದ್ಯಾಭ್ಯಾಸ ಹೊಂದಿ, ಮಕ್ಕಳು ಭವಿಷ್ಯ ರೂಪಿಸಿಕೊಳ್ಳುವಂತೆ ಆಗಬೇಕು ಎಂದರು.
ವಿದ್ಯಾರ್ಥಿನಿಲಯಗಳನ್ನು ಶುಚಿಯಾಗಿಟ್ಟುಕೊಳ್ಳುವುದರ ಜೊತೆಗೆ ಆಹಾರ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕೆಂದ ಅವರು, ಇವುಗಳ ಬಗ್ಗೆ ಸಮಸ್ಯೆ ಉಂಟಾದಲ್ಲಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದರು.
ಜಿಲ್ಲಾದ್ಯಂತ ಹಾಸ್ಟೆಲ್ಗಳ ಬೇಡಿಕೆ ಹೆಚ್ಚಿದ್ದು, ಈ ಬಗ್ಗೆ ಸರ್ಕಾರಕ್ಕೆ ಹೆಚ್ಚಿನ ವಿದ್ಯಾರ್ಥಿನಿಲಯಗಳನ್ನು ಒದಗಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದ ಅವರು, ಈ ಸಮಸ್ಯೆಯು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸರಿ ಹೊಂದಲಿದೆ ಎಂದರು.
ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಈ ರೀತಿಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಇದರಿಂದಾಗಿ ವಿದ್ಯಾರ್ಥಿನಿಲಯಗಳ ಸುಧಾರಣೆ ತರಲಾಗಿದೆ ಎಂದು ಹೇಳಿದರು.
ಉತ್ತಮ ಸಾಧನೆ ಮಾಡಿ: ಜಿ.ಪಂ. ಉಪಾಧ್ಯಕ್ಷೆ ಸುಜಾತ ಶಿವಲಿಂಗಪ್ಪ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಯಾವುದೇ ಒತ್ತಡ ಇತರೆ ಕೆಲಸ ಕಾರ್ಯಗಳು ಇಲ್ಲದಿರುವುದರಿಂದ ಉತ್ತಮ ವ್ಯಾಸಂಗಕ್ಕೆ ವಿದ್ಯಾರ್ಥಿನಿಲಯಗಳಿಗೆ ಸಹಾಯವಾಗಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಭವಿಷ್ಯದಲ್ಲಿ ಸಾಧನೆ ಮಾಡಿ ಪೋಷಕರಿಗೆ ಗೌರವ ತಂದುಕೊಡಬೇಕೆಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಜಿ.ಪಂ. ಸದಸ್ಯರಾದ ಹೇಮಾವತಿ ಕೃಷ್ಣಪ್ಪ, ಜ್ಯೋತಿ ಹೇಮಶೇಖರ್, ಜೆ.ಡಿ. ಲೋಕೇಶ್, ನಾಗರಾಜ್, ಕವಿತಾ, ಭಾಗ್ಯ ರಂಗನಾಥ್, ತಾ.ಪಂ. ಅಧ್ಯಕ್ಷೆ ಅಂಬಿಕಾ ಶಿವಕುಮಾರ್, ಉಪಾಧ್ಯಕ್ಷ ಪುಟ್ಟೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಧರ್ಮಯ್ಯ, ಉಪ ಕಾರ್ಯದರ್ಶಿ ರಾಜಗೋಪಾಲ್ ಇತರರು ಇದ್ದರು.