ಕೆರೆಗಳ ಪುನರುಜ್ಜೀವನ ಯೋಜನೆ ಅವ್ಯವಹಾರ
ಚಿಕ್ಕಮಗಳೂರು: ಕೆರೆಗಳ ಪುನರುಜ್ಜೀವನ ಯೋಜನೆಯ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಜಿಲ್ಲಾ ಪಂಚಾಯ್ತಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
2010-11ನೇ ಸಾಲಿನಲ್ಲಿ ರಾಜ್ಯದ ಕೆರೆಗಳ ಪುನರುಜ್ಜೀವನಕ್ಕಾಗಿ ರಾಜ್ಯ ಸರ್ಕಾರ 7800 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ಕಾಮಗಾರಿಗಳ ಪ್ರಗತಿ ವಿವರಗಳನ್ನು ಪಾರದರ್ಶಕತೆಯ ದೃಷ್ಟಿಯಿಂದ ಅಂತರ್ಜಾಲದಲ್ಲಿ ಪ್ರಕಟಿಸಲು ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಈ ಬಗ್ಗೆ ತರಬೇತಿಯನ್ನು ನೀಡಲಾಗಿತ್ತು. ಕಾಮಗಾರಿ ಟೆಂಡರ್ ನಂತರ ಕಾಮಗಾರಿ ಪ್ರಾರಂಭಕ್ಕೆ ಮುನ್ನ ಪ್ರಕಟಿಸಲು ತಿಳಿಸಲಾಗಿತ್ತು. ಹಾಗೂ ಕಾಮಗಾರಿಯ ಪ್ರಗತಿಯ ಬಗ್ಗೆ ಛಾಯಾಚಿತ್ರ ಹಾಗೂ ವೀಡಿಯೋ ಚಿತ್ರೀಕರಣ ಮಾಡಲು ಸಹ ಯೋಜನೆಯಲ್ಲಿ ಅವಕಾಶ ನೀಡಲಾಗಿತ್ತು.
ಸೂಕ್ತ ತನಿಖೆ ನಡೆಸಲಿ: ಆದರೆ, ಈ ಯಾವುದೇ ನಿಯಮಗಳನ್ನು ಪಾಲಿಸದೇ ನಿಬಂಧನೆಗಳನ್ನೆಲ್ಲಾ ಗಾಳಿಗೆ ತೂರಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಅರದವಳ್ಳಿ ಗ್ರಾಮದ ಆರದವಳ್ಳಿ ಕೆರೆಗೆ ಸರ್ಕಾರ 25 ಲಕ್ಷ ರು.ಗಳ ಕಾಮಗಾರಿ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ, ಯೋಜನೆಯಲ್ಲಿ ನಿಗದಿಪಡಿಸಿರುವಂತೆ ಕಾಮಗಾರಿ ನಡೆದಿಲ್ಲ. ಕೆರೆಗಳಲ್ಲಿ ಹಾಗೂ ಯಾವುದೇ ಜಮೀನಿನಲ್ಲಿ ಜಾಲಿಗಿಡ ಬೆಳೆದಿರುವುದಿಲ್ಲ. ಇಲ್ಲದ ಜಾಲಿಗಿಡ ಕಡಿದಿರುವುದಾಗಿ 80 ಸಾವಿರ ಹಣ ದುರುಪಯೋಗವಾಗಿದೆ.ಇದೇ ರೀತಿ ಇನ್ನೂ ಹಲವಾರು ಯೋಜನೆಗಳ ಹೆಸರಲ್ಲಿ ಹಣ ದುರುಪಯೋಗ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಮಗಾರಿ ಪರಿಶೀಲಿಸಿ: ಕರೆಗಳ ಪುನರುಜ್ಜೀವನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಶಾಸಕರು, ರೈತ ಮುಖಂಡರನ್ನೊಳಗೊಂಡ ಜಂಟಿ ಸಮಿತಿ ರಚಿಸಿ ತನಿಖೆ ನಡೆಸಬೇಕು. ಕಾಮಗಾರಿ ಮಾಡದೇ ಬಿಲ್ ಪಡೆದಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಬಿಲ್ ಪಡೆದಿರುವ ಹಣವನ್ನು ಗುತ್ತಿಗೆದಾರರಿಂದ ವಾಪಸ್ ಪಡೆಯಬೇಕು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾಧ್ಯಕ್ಷ ವಿನಾಯಕ ಮಾಳೂರುದಿಣ್ಣೆ, ಜಿಲ್ಲಾ ಗೌರವಾಧ್ಯಕ್ಷ ಕೃಷ್ಣೇಗೌಡ, ಹಸಿರು ಸೇನೆ ಜಿಲ್ಲಾಧ್ಯಕ್ಷ ಶಶಿಧರ್ ಇದ್ದರು.