ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ: ಜೀವರಾಜ್
ನರಸಿಂಹರಾಜಪುರ: ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಡಾ. ಕಸ್ತೂರಿ ರಂಗನ್ ಹಾಗೂ ಮಾಧವ್ ಗಾಡ್ಗಿಳ್ ಅವರ ವರದಿ ಆಧರಿಸಿ ಪಶ್ಚಿಮ ಘಟ್ಟದಲ್ಲಿ ಹೊಸ ಅರಣ್ಯ ನೀತಿ ಜಾರಿಗೆ ತರಲು ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದು, ಕಷ್ಟಪಟ್ಟು ತಮ್ಮ ಬದಕು ಕಟ್ಟಿಕೊಂಡಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯ ಕೆಲವು ಅಧಿಕಾರಿಗಳು ಹಾಗೂ ವಿದೇಶಿ ನೆರವು ಪಡೆದು ಐಷಾರಾಮಿ ಜೀವನ ನಡೆಸುತ್ತಿರುವ ಕೆಲವು ಢೋಂಗಿ ಪರಿಸರವಾದಿಗಳು ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಪರಿಸರ ತಜ್ಞ ಎನಿಸಿಕೊಂಡಿರುವ ಮಾಧವ ಗಾಡ್ಗೀಳ್ 1.60 ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಭೂ ಪ್ರದೇಶವನ್ನು ಅತಿ ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಣೆ ಮಾಡಿ, ಪಶ್ಚಿಮ ಘಟ್ಟವನ್ನು ಉಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಪಿ.ಜೆ. ಆಂಟೋನಿ, ಬಿಜೆಪಿ ಮುಖಂಡ ನೀಲೇಶ್, ಗೋಪಾಲ್, ಜಯರಾಂ, ಮಂಜುನಾಥ ಲಾಡ್ ಉಪಸ್ಥಿತರಿದ್ದರು.