ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಚಿಕ್ಕಮಗಳೂರು: ಕಿಡ್ನಿ ವೈಫಲ್ಯಕ್ಕೆ ಒಳಗಾದವರನ್ನು ವಿಕಲಚೇತನರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿಡ್ನಿ ವೈಫಲ್ಯತೆಗೆ ಒಳಗಾದ ರೋಗಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದಿಂದ ಮಾನಸ ಮಹಿಳೆಯರ ಸ್ವ- ಉದ್ಯೋಗ ತರಬೇತಿ ಸಂಸ್ಥೆಯ ನೇತೃತ್ವದಲ್ಲಿ ಮೌನ ಮೆರವಣಿಗೆ ನಡೆಸಿದ ರೋಗಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕಿಡ್ನಿ ವೈಫಲ್ಯತೆಗೆ ಒಳಗಾದವರಿಗೆ ಉಚಿತ ಬಸ್ ಮತ್ತು ರೈಲ್ವೆ ಪಾಸ್ಗಳನ್ನು ವಿತರಿಸಬೇಕು. ಅವರ ಜೀವನ ನಿರ್ವಹಣೆಗೆ ಮಾಸಿಕ ಧನ ಸಹಾಯ ನೀಡಬೇಕು. ಡಯಾಲಿಸಿಸ್ ರೋಗಿಗಳ ಮರಣದ ನಂತರ ಅವರ ಕುಟುಂಬಕ್ಕೆ ವಿಮಾ ಮಾದರಿಯಲ್ಲಿ ಧನ ಸಹಾಯ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕೊಲೆ ಯತ್ನ: ಇಬ್ಬರ ಬಂಧನ
ಮೂಡಿಗೆರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ವಾಹನ ಬಾಡಿಗೆ ಪಡೆದ ಮೂವರು ವ್ಯಕ್ತಿಗಳು, ಚಾರ್ಮಡಿ ಘಾಟಿಯ ಮಲಯ ಮಾರುತ ಗೆಸ್ಟ್ಹೌಸ್ ಬಲಿ ಚಾಲಕನ ಕೊಲೆಗೆ ಯತ್ನಿಸಿ ವಿಫಲರಾಗಿದ್ದು, ಘಟನೆ ನಡೆದು 48 ಗಂಟೆಗಳಲ್ಲಿ ಇಬ್ಬರನ್ನು ಬಣಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದ.ಕ. ಜಿಲ್ಲೆಯ ಉಜಿರೆಯ ಸೀತರಾಮ್ ಎಂಬುವವರ ಜೀಪನ್ನು ಬಾಡಿಗೆಗೆ ಗೊತ್ತುಮಾಡಿದ್ದ ಅದೇ ಗ್ರಾಮದ ಸೀತರಾಮ್ ಆಲಿಯಾಸ್ ಪೂಜಾರಿ, ರಮೇಶ್ ಮತ್ತು ಲಿಂಗಪ್ಪ ಎಂಬುವವರು ಕಳೆದ 3 ದಿನಗಳ ಹಿಂದೆ ಮೂಡಿಗೆರೆಗೆ ಬರುತ್ತಿದ್ದಾಗ ಬಣಕಲ್ ಠಾಣಾ ವ್ಯಾಪ್ತಿಯ ಮಲಯ ಮಾರುತ ಗೆಸ್ಟ್ಹೌಸ್ ಬಳಿ ಜೀಪನ್ನು ನಿಲ್ಲಿಸಿ ಚಾಲಕ, ಮಾಲೀಕ ಸೀತರಾಮ್ ಅವರಿಗೆ ಕಲ್ಲಿನಿಂದ ಹೊಡೆದು ಮಾರಾಣಾಂತಿಕ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಜಿಲ್ಲಾ ಪೊಲೀಸ್ ಅಧಿಕ್ಷಕ ಅಭಿಷೇಕ್ ಗೋಯಲ್, ಉಪ ಅಧೀಕ್ಷಕ ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಸ್.ಎಸ್. ಹಿರೇಮಠ್, ಠಾಣಾಧಿಕಾರಿ ಹಾಲಪ್ಪ ನೇತೃತ್ವದ ತಂಡ ಸೀತರಾಮ್ ಅಲಿಯಾಸ್ ಪೂಜಾರಿ ಮತ್ತು ರಮೇಶ್ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.