ಕುದುರೆಮುಖ ಕೇಂದ್ರೀಯ ವಿದ್ಯಾಲಯ ಬಂದ್
ಕ.ಪ್ರ.ವಾರ್ತೆ , ಮೂಡಿಗೆರೆ , ಏ. 1
ಕುದುರೆಮುಖದ ಕೇಂದ್ರೀಯ ವಿದ್ಯಾಲಯವನ್ನು ಮುಚ್ಚುವ ಮೂಲಕ ನೂರಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವಂತಾಗಿದೆ. ಕುದುರೆಮುಖ ಕಂಪನಿ ಹಾಗೂ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಕಿತ್ತಾಟದಿಂದ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುವಂತಾಗಿದೆ.
ಪ್ರತಿವರ್ಷ ಏಪ್ರಿಲ್ 1ನೇ ತಾರಿಕಿನಂದು ಕೇಂದ್ರೀಯ ವಿದ್ಯಾಲಯ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಮಂಗಳವಾರ ವಿದ್ಯಾಲಯದ ಸುಮಾರು 120 ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಶಾಲೆಯ ಗೇಟ್ಗೆ ಬೀಗ ಜಡಿಯಲಾಗಿತ್ತು. ಅಲ್ಲದೆ ಪೊಲೀಸರನ್ನು ನಿಯೋಜಿಸಿ ಶಾಲೆಯ ಗೇಟ್ ಒಳಗಡೆ ಯಾರೂ ಬರದಂತೆ ನಿರ್ಬಂಧ ಹೇರಲಾಗಿತ್ತು.
ಗೇಟ್ಗೆ ಬೀಗ: ವಿಷಯ ತಿಳಿದಂತೆ ಮಕ್ಕಳ ಪೋಷಕರು ಶಾಲೆ ಬಳಿ ಬಂದು ಶಾಲಾ ಮುಖ್ಯಸ್ಥರ ಬಳಿ ಬಂದು ವಿಚಾರಿಸಿದಾಗ. ಶಾಲೆಯನ್ನು ತೆರೆಯಬಾರದೆಂದು ಮೇಲಧಿಕಾರಿಗಳು ಹೇಳಿರುವುದರಿಂದ ಗೇಟ್ಗೆ ಬೀಗ ಹಾಕಲಾಗಿದ್ದು, ಮಕ್ಕಳನ್ನು ಯಾವುದೇ ಕಾರಣಕ್ಕೂ ಒಳಗಡೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇದರಿಂದ ವಿದ್ಯಾರ್ಥಿಗಳು ಒಂದು ಗಂಟೆಗಳ ಕಾಲ ಶಾಲೆಯ ಹೊರಗೆ ಬಿಸಿಲಿನಲ್ಲಿ ಕುಳಿತು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಒಂದೆರಡು ಮಕ್ಕಳು ಅಸ್ವಸ್ಥರಾದರು.
ವಿದ್ಯಾರ್ಥಿಗಳ ಪ್ರತಿಭಟನೆಯ ವಿಷಯ ತಿಳಿದ ವಿದ್ಯಾಲಯ ಸಂಘಟನೆ ಮೈಸೂರು ಕೆವಿಎಸ್ನ ಪ್ರಾಂಶುಪಾ ರಾಜು ಹಾಗೂ ಬೆಂಗಳೂರು ಕೆವಿಎಸ್ನ ಪ್ರಾಂಶುಪಾಲ ಕೆ.ಎನ್.ಭಟ್ ಅವರು ಸ್ಥಳಕ್ಕೆ ಆಗಮಿಸಿ. ವಿದ್ಯಾರ್ಥಿಗಳನ್ನು ಶಾಲೆಯ ಒಳಗಡೆ ಬಿಡುವಂತೆ ಆದೇಶ ನೀಡಿದರೂ. ಯಾವುದೇ ಹಾಜರಾತಿ ಹಾಗೂ ಪಾಠಗಳನ್ನು ಮಾಡಲಿಲ್ಲ.
ಅಧಿಕಾರಿಗಳಿಗೆ ತರಾಟೆ: ಈ ಸಂದರ್ಭದಲ್ಲಿ ಪೋಷಕರು ಹಾಗೂ ಪ್ರಾಂಶುಪಾಲರ ಮಧ್ಯ ಮಾತಿನ ಚಕಮಕಿಯು ನಡೆಯಿತು. ಯಾವುದೇ ಒಂದು ಮನ್ಸೂಚನೆ ಇಲ್ಲದೆ ಶಾಲೆಯನ್ನು ಮುಚ್ಚಿರುವುದು ಸರಿಯಲ್ಲ. ನ್ಯಾಯಲಯದ ತೀರ್ಪು ಬರುವ ವರೆಗೆ ವಿದ್ಯಾರ್ಥಿಗಳಿಗೆ ಹಾಜರಾತಿ ಹಾಗೂ ಪಾಠವನ್ನು ಮುಂದುವರೆಸಬೇಕು. ಕಂಪೆನಿ ಮತ್ತು ನಿಮ್ಮಗಳ ಮಧ್ಯೆ ನಮ್ಮ ಮಕ್ಕಳನ್ನು ಬಲಿ ಪಶು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆದರೆ ಅಧಿಕಾರಿಗಳು ಹೇಳುವ ಪ್ರಕಾರ ಈ ಶಾಲೆಯನ್ನು ಕುದುರೆಮುಖ ಕಂಪೆನಿಯು ಕೆವಿಎಸ್ಗೆ ಅನುದಾನ ನೀಡಿ ನಡೆಸಿಕೊಂಡು ಹೋಗುತ್ತಿತ್ತು. ಆದರೆ 2014 ಹಾಗೂ15 ಸಾಲಿನಿಂದ ಕಂಪೆನಿ ನಷ್ಟದಲ್ಲಿರುವುದರಿಂದ ಅನುದಾನ ನೀಡಿ ನಡೆಸಿಕೊಂಡು ಹೋಗಲು ಸಾದ್ಯವಿಲ್ಲ. ಆದ್ದರಿಂದ 2014 ಮತ್ತು 15ನೇ ಸಾಲಿನಿಂದ ವಿದ್ಯಾಲಯವನ್ನು ಮುಚ್ಚಿ ಎಂದು ಹೇಳಿದೆ. ಆದ ಕಾರಣ ನಾವು ಶಾಲೆಯನ್ನು ಅನಿವಾರ್ಯವಾಗಿ ಮುಚ್ಚಬೇಕಾಗುತ್ತದೆ.ಅಲ್ಲದೆ ಈ ಬಗ್ಗೆ ಕಂಪೆನಿ ಮತ್ತು ಶಾಲೆ ಪೋಷಕರ ಗಮನಕ್ಕೆ ತರಲಾಗಿದೆ ಎಂದರು.
ನಾವು ಎಲ್ಲಿಗೆ ಹೋಗೋಣ: ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ನಮಿತ, ನಮಗೆ ಶಾಲೆ ಮುಚ್ಚುವ ಬಗ್ಗೆ ಯಾವುದೇ ಮುನ್ಸೂಚನೆಯನ್ನು ನೀಡಿರಲಿಲ್ಲ. ನಮ್ಮ ಶಿಕ್ಷಣದ ಹಕ್ಕಿಗೆ ಧಕ್ಕೆ ಮಾಡಿದ್ದಾರೆ. ನಮಗೆ ಟಿ.ಸಿ. ಕೂಡ ಕೊಟ್ಟಿಲ್ಲ. ಶಾಲೆ ಇವತ್ತಿನಿಂದ ಪ್ರಾರಂಬವಾಗಿದೆ. ಈಗ ನೀವು ಶಾಲೆಗೆ ಬರಬೇಡಿ ಬೇರೆ ಶಾಲೆಗೆ ಹೋಗಿ ಅಂದ್ರೆ ನಾವು ಎಲ್ಲಿಗೆ ಹೋಗೋದು, ಬೇರೆ ಕೆವಿಎಸ್ಗೆ ಹೋಗ ಬೇಕಾದರೆ ಮಂಗಳೂರು ಅಥವಾ ಹಾಸನಕ್ಕೆ ಹೋಗಬೇಕು. ಅಲ್ಲಿಗೆ ನಾವು ಹೋಗಿ ಶಾಲೆಗೆ ಸೇರುವುದು ಆಗದ ಮಾತು. ಕುದುರೆಮುಖ ಕಂಪೆನಿ ಮತ್ತು ಕೆವಿಕೆ ನಮ್ಮ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. ನಾವು ಈಗಾಗಲೇ ಪೋಲೀಸ್ ಠಾಣೆಗೆ ಕೆವಿಕೆ ವಿರುದ್ಧ ದೂರು ನೀಡಿದ್ದೇವೆ ಎಂದರು. ಈ ಬಗ್ಗೆ ಕೆವಿಎಸ್ ಹಾಗೂ ಪೋಷಕರ ನಡುವೆ ಸಂಜೆಯವರೆಗೆ ಮಾತುಕತೆ ನಡೆಯಿತಾದರೂ ಸಮಸ್ಯೆಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ.
ಕುದುರೆಮುಖ ಕಂಪೆನಿ ಹೇಳುವ ಪ್ರಕಾರ, ಸುಪ್ರಿಂ ಕೋರ್ಟ್ ಆದೇಶದ ಅನ್ವಯ ಕಂಪೆನಿ ಮುಚ್ಚಲಾಗಿದೆ. ಆದ್ದರಿಂದ ನಾವು ಶಾಲೆ ನಡೆಸಲು ಅನುದಾನ ನೀಡಲಾಗುವುದಿಲ್ಲ. ಬೇಕಾದರೆ ಕೆವಿಎಸ್ ಶಾಲೆ ನಡೆಸಿಕೊಂಡು ಹೋಗಲಿ ಎನ್ನುತ್ತದೆ.
ಶಾಲೆ ನಡೆಸದಿದ್ದರೆ ನೀರು ಕೊಡಲ್ಲಾ...
ಮೂಡಿಗೆರೆ: ಸಾವಿರಾರು ರುಪಾಯಿಯ ನಮ್ಮ ಆಸ್ತಿ ಕಿತ್ತುಕೊಂಡು, ಇಲ್ಲಿಯ ಸುಂದರ ಪರಿಸರವನ್ನು ಹಾಳು ಮಾಡಿ ಕೋಟ್ಯಂತರ ರು. ಆದಾಯ ಮಾಡಿಕೊಂಡ ಕಂಪೆನಿ ಈಗ ವಿದ್ಯಾಲಯನ್ನು ಮುಚ್ಚುವುದರ ಮುಖಾಂತರ ನಮ್ಮ ಮಕ್ಕಳ ಭವಿಷ್ಯವನ್ನೆ ಕಿತ್ತು ಕೊಳ್ಳುತ್ತಿದ್ದಾರೆ. ಆದ್ದರಿಂದ ಲಕ್ಯಾ ಡ್ಯಾಂನಿಂದ ಮಂಗಳೂರಿಗೆ ನೀರು ಹರಿಸಲು ಬಿಡುವುದಿಲ್ಲ ಎಂದು ಕುದುರೇ ಮುಖದ ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದ್ದಾರೆ.
ಒರಿಸ್ಸಾದ ಅಭಿವೃದ್ದಿಗಾಗಿ ಕೋಟಿ ರೂ ಅನುದಾನ ನೀಡುತ್ತಿದೆ. ಪಿಲಿಕುಲ ನಿಸರ್ಗ ಧಾಮಕ್ಕೆ ಕಂಪೆನಿ ಅನುದಾನ ನೀಡುತ್ತಿದೆ. ಚಿಕ್ಕಬಳ್ಳಾಪುರದಲ್ಲಿರುವ ಕೆವಿಎಸ್ಗೆ ಅನುದಾನ ನೀಡುತ್ತಿದೆ. ಆದರೆ ಇಲ್ಲಿಯ ಶಾಲೆಯನ್ನು ನಡೆಸಲು ಸಾದ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ನಿಮಗೆ ಶಾಲೆ ನಡೆಸಲು ಸಾದ್ಯವಿಲ್ಲ ಎಂದಾದರೆ ಇಲ್ಲಿಯ ಯಾವುದೇ ಒಂದು ವಸ್ತುವನ್ನು ಕೂಡ ನೀವು ಮುಟ್ಟಬಾರದು. ಈ ಕೂಡಲೇ ಇಲ್ಲಿಂದ ಜಾಗ ಖಾಲಿ ಮಾಡಿ. ನಮ್ಮ ಊರಿನಲ್ಲಿಯೇ ನೀರಿಗಾಗಿ ಪರದಾಡುತಿದ್ದಾರೆ ಆದ್ದರಿಂದ ಇಲ್ಲಿಂದ ಮಂಗಳೂರಿನ ಕೆಐಒಸಿಎಲ್ ಕಂಪನಿಗೆ ಕುದುರೆಮುಖದ ಲಕ್ಯಾ ಡ್ಯಾಂನಿಂದ ನೀರು ನೀಡಲಾಗುತ್ತಿದೆ.
ಆದ್ದರಿಂದ ಈ ಕೂಡಲೆ ಕಂಪೆನಿಯು ಕೆವಿಎಸ್ ಜತೆ ಒಪ್ಪಂದ ಮಾಡಿಕೊಂಡು ಶಾಲೆಯನ್ನು ನಡೆಸಬೇಕು. ನಡೆಸದೇ ಹೋದಲ್ಲಿ ಕುದುರೆಮುಖದಿಂದ ಮಂಗಳೂರಿನಲ್ಲಿರುವ ಕಂಪನಿಗೆ ನೀರು ತೆಗೆದುಕೊಂಡು ಹೋಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗ್ರಾಮಸ್ಥರಾದ ವಿಶ್ವನಾಥ ಗೌಡ ಹಾಗೂ ಜಗದೀಶ್ ನಲ್ಲಿಬೀಡು ಎಚ್ಚರಿಕೆ ನೀಡಿದ್ದಾರೆ.