'25 ದಿನಗಳಿಂದ ಕುಡಿಯಲು ನೀರಿಲ್ಲ'
ತರೀಕೆರೆ: ಇಲ್ಲಿನ ಬೆಟ್ಟದಾವರೆಕೆರೆ ಗ್ರಾಮದಲ್ಲಿ 25 ದಿವಸಗಳಿಂದ ಕುಡಿಯುವ ನೀರಿಗೆ ತೀವ್ರ ತೊಂದರೆ ಎಂದು ಆರೋಪಿಸಿ ಗ್ರಾಮಸ್ಥರು ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ನೇತೃತ್ವದಲ್ಲಿ ಬುಧವಾರ ಖಾಲಿ ಕೊಡಗಳೊಂದಿಗೆ ಪಟ್ಟಣದ ಮಿನಿ ವಿಧಾನಸೌಧವರೆಗೆ ಪ್ರತಿಭಟನೆ ನಡೆಸಿದರು.
ಸಾಲುಮರದಮ್ಮನ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಗ್ರಾಮಸ್ಥರು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಯನ್ನು ಖಂಡಿಸಿದರು.
25 ದಿನಗಳಿಂದ ನೀರಿಲ್ಲ: ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ, ಬೆಟ್ಟದಾವರೆಕೆರೆ ಗ್ರಾಮದಲ್ಲಿ ಕಳೆದ 25 ದಿನಗಳಿಂದ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮಹಿಳೆಯರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ವ್ಯವಸ್ಥೆಯೂ ಇಲ್ಲವಾಗಿದೆ. ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿ ಸೌಲಭ್ಯಕ್ಕೆ ಆಗ್ರಹಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮುಂದುವರಿಸಿದ್ದಾರೆ. ಸಮರ್ಪಕ ವಿದ್ಯುತ್ ಸರಬರಾಜಿಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದರು.
ಕೂಡಲೇ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಮತ್ತು ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಬೆಟ್ಟದಾವರೆಕೆರೆ ಗ್ರಾ.ಪಂ. ಉಪಾಧ್ಯಕ್ಷ ತಿಮ್ಮಾಬೋವಿ, ಗೌರೀಶ್, ಹೇಮಾವತಿ, ಮಂಜುಳಬಾಯಿ, ಗ್ರಾಮದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.