ಅನ್ನಪೂರ್ಣ ಜಿಪಂ ಉಪಾಧ್ಯಕ್ಷೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.2
ಜಿಲ್ಲಾ ಪಂಚಾಯ್ತಿಯ ನೂತನ ಉಪಾಧ್ಯಕ್ಷರಾಗಿ ಅನ್ನಪೂರ್ಣ ಚನ್ನಕೇಶವ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಹಿಂದೆ ಜಿಪಂನ ಉಪಾಧ್ಯಕ್ಷರಾಗಿದ್ದ ಸುಜಾತ ಬಿಜೆಪಿ ಪಕ್ಷದಲ್ಲಿನ ಆಂತರಿಕ ಒಪ್ಪಂದದ ಮೇರೆಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದರಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.
ಮೈಸೂರು ಪ್ರಾದೇಶಿಕ ಆಯುಕ್ತರಾದ ಜಯಂತಿ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. ಜಿಪಂನಲ್ಲಿ ಬಿಜೆಪಿ ಸದಸ್ಯರ ಸಂಖ್ಯಾ ಬಲ ಹೆಚ್ಚಿದ್ದರಿಂದ ಸಹಜವಾಗಿಯೇ ಇತರೆ ಪಕ್ಷಗಳು ಚುನಾವಣಾ ಕಣಕ್ಕೆ ಪ್ರವೇಶ ಮಾಡಲಿಲ್ಲ. ಅನ್ನಪೂರ್ಣ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ಪ್ರಾದೇಶಿಕ ಆಯುಕ್ತರು ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಬಿ. ಕರುಣಾಕರ್ ಉಪಸ್ಥಿತರಿದ್ದರು.
ಅಭಿನಂದನೆ: ಇದೇ ಸಂದರ್ಭ ನೂತನ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಸಾಮಾಜಿಕ ನ್ಯಾಯದಡಿ ಬಿಜೆಪಿ ಎಲ್ಲರಿಗೂ ಅವಕಾಶ ಕಲ್ಪಿಸುತ್ತಾ ಬರುತ್ತಿದೆ. ಜನರು ಯಾರನ್ನು ಬೇಕಾದರೂ ಅಧಿಕಾರಕ್ಕೇರಿಸಬಹುದು. ಹಿಂದಿನಂತೆ ವಂಶ ಪಾರಂಪರ್ಯವಾಗಿ ಅಧಿಕಾರ ನಡೆಸಲು ಇಂದು ಸಾಧ್ಯವಿಲ್ಲ ಎಂದು ಹೇಳಿದರು.
ಅಧಿಕಾರಿಗಳ ಹಾಗೂ ಸದಸ್ಯರ ವಿಶ್ವಾಸ ಪಡೆದಲ್ಲಿ ಅತ್ಯಲ್ಪ ಅವಧಿಯಲ್ಲೂ ಸಹ ಉತ್ತಮ ಕೆಲಸ ಮಾಡಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಶ್ವತ ಅಧಿಕಾರ ಹೊಂದಲು ಯಾರಿಗೂ ಸಾಧ್ಯವಿಲ್ಲ. ಕಾಲದ ಜೊತೆ ಅಧಿಕಾರವೂ ಹಸ್ತಾಂತರವಾಗುತ್ತದೆ. ಅಧಿಕಾರವಿದ್ದಾಗ ಉತ್ತಮ ಆಡಳಿತ ನೀಡಿ ಜನರ ವಿಶ್ವಾಸವನ್ನು ಪಡೆಯಬೇಕು. ಅಧಿಕಾರವಧಿಯಲ್ಲಿ ನಾವು ಮಾಡುವ ಕೆಲಸ ಶಾಶ್ವತವೇ ಹೊರತು ನಮ್ಮ ಅಧಿಕಾರವಲ್ಲ ಎಂದರು.
ಜಿಪಂ ಅಧ್ಯಕ್ಷೆ ಪದ್ಮ ಚಂದ್ರಪ್ಪ ಮಾತನಾಡಿ, ಬಿಜೆಪಿ ಪಕ್ಷವು ಮಹಿಳೆಯರಿಗೂ ಪ್ರಾಧ್ಯಾನ್ಯತೆ ನೀಡಿರುವುದಕ್ಕೆ ವಿವಿಧ ಸ್ಥಾನಗಳಿಗೆ ಮಹಿಳೆಯರನ್ನು ನೇಮಿಸಿರುವುದೇ ಸಾಕ್ಷಿ. ನಮ್ಮ ಅಧಿಕಾರದ ಅವಧಿಯಲ್ಲಿ ಪಕ್ಷಕ್ಕೆ ಹಾಗೂ ನಮ್ಮ ಸ್ಥಾನಕ್ಕೆ ಯಾವುದೇ ಕಪ್ಪುಚುಕ್ಕಿ ಬರದಂತೆ ಉತ್ತಮ ಆಡಳಿತ ನಡೆಸುವ ವಿಶ್ವಾಸವಿದ್ದು, ನೂತನ ಉಪಾಧ್ಯಕ್ಷರು ಇದಕ್ಕೆ ಸಹಕರಿಸಿ ಅಭಿವೃದ್ಧಿಗೆ ಕೈಜೋಡಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ನೂತನ ಉಪಾಧ್ಯಕ್ಷೆ ಅನ್ನಪೂರ್ಣ ಚನ್ನಕೇಶವ ಮಾತನಾಡಿ, ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ಗೆ ಆದ್ಯತೆ ನೀಡುತ್ತೇನೆ. ನನಗೆ ಯಾವುದೇ ರಾಜಕೀಯ ಅನುಭವವಿಲ್ಲದಿದ್ದರೂ ಪಕ್ಷ ನನ್ನನ್ನು ಗುರುತಿಸಿ ಸ್ಥಾನ ನೀಡಿ ಗೌರವಿಸಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಸುಚಿತಾ ನರೇಂದ್ರ, ಸದಸ್ಯರಾದ ನಿರಂಜನ್, ಶಿವಶಂಕರ್, ಕೃಷ್ಣಮೂರ್ತಿ, ಲೋಕೇಶ್, ಶೃಂಗೇರಿ ಶಿವಣ್ಣ, ರಂಗನಾಥ್, ಕವಿತಾ ಬೆಳ್ಳಿ ಪ್ರಕಾಶ್, ಹೇಮಾವತಿ, ರವೀಂದ್ರ ಕುಕ್ಕಡಿಗೆ, ಶಿವೇಗೌಡ, ಆನಂದಪ್ಪ ಅಭಿನಂದಿಸಿದರು.