ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನಪ್ರಿಯ ಯೋಜನೆ ಜಾರಿಗೆ ತಂದ ಕಾಂಗ್ರೆಸ್: ಸಂಸದ ಹೆಗ್ಡೆ

Lingaraj Badiger
Updated On : 3 Apr 2014, 11:10 am

ನರಸಿಂಹರಾಜಪುರ: ಆಹಾರ ಭದ್ರತಾ ಕಾಯ್ದೆ, ಕಡ್ಡಾಯ ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಕಾಯ್ದೆ, ಜನಲೋಕಪಾಲ್ ಮಸೂದೆ ಮುಂತಾದ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದು  ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಪಟ್ಟಣದ ನೀರಿನ ಟ್ಯಾಂಕ್ ವೃತ್ತದ ಸಮುದಾಯ ಭವನದಲ್ಲಿ ಮಂಗಳವಾರ ರಾತ್ರಿ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಡವರ್ಗದ ಜನರಿಗೆ ಆಹಾರ ಒದಗಿಸುವ ಸಲುವಾಗಿ 1ರ ದರದಲ್ಲಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಶೇ.70ಕ್ಕೂ ಅಧಿಕ ಜನರಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಬಿಜೆಪಿ ಅವರು ಅಧಿಕಾರದಲ್ಲಿದ್ದಾಗ ಬಿಪಿಎಲ್ ಕಾರ್ಡ್ ಕೊಡುವುದರ ಬದಲು ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಿದರು.
ತರೀಕೆರೆ- ಮಂಗಳೂರು ಜಿಲ್ಲಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ. ತೀರ್ಥಹಳ್ಳಿ- ಉಡುಪಿ ರಸ್ತೆ ಮೇಲ್ದರ್ಜೆಗೆ, ಮೂಡಿಗೆರೆ, ಕಡೂರು, ಚಿಕ್ಕಮಗಳೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಚಿಕ್ಕಮಗಳೂರು -ಸಕಲೇಶಪುರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಅಡಕೆ ಹಾನಿಕಾರ ಎಂಬ ವರದಿಯನ್ನು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ನೇಮಿಸಿದ ಸಮಿತಿ ವರದಿ ನೀಡಿದೆ.
ಈ ಸಮಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಂಸದರಿದ್ದರು. ಈ ಸಮಿತಿ ಅಡಕೆಯಲ್ಲಿ ಹಾನಿಕಾರಕ ಅಂಶ ಇರುವುದರಿಂದ ನಬಾರ್ಡ್, ವಾಣಿಜ್ಯ ಬ್ಯಾಂಕುಗಳು ಹಾಗೂ ಸಹಕಾರ ಸಂಘಗಳು ಸಾಲ ನೀಡಬಾರದು ಎಂದು ತಿಳಿಸಿತ್ತು ಎಂದು ಆರೋಪಿಸಿದರು. ಕಾಂಗ್ರೆಸ್ ಮುಖಂಡ ಟಿ.ಡಿ.ರಾಜೇಗೌಡ ಮಾತನಾಡಿ ಮುಂದಿನ ದಿನಗಳಲ್ಲಿ ಸರ್ಕಾರ ಅಡಕೆಗೆ ಹಳದಿ ಎಲೆ ಪೀಡಿತ ರೋಗದ ತೋಟದ ರೈತರ ಸಾಲ ಹಾಗೂ ಬಡ್ಡಿ ಮನ್ನಾ ಮಾಡುವ ಯೋಜನೆ ರೂಪಿಸುವ ಸಾಧ್ಯತೆಯಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಆರ್. ರವಿಶಂಕರ್ ಮಾತನಾಡಿದರು. ಜಿಪಂ ಸದಸ್ಯ ಮಹಮ್ಮದ್ ಇಫ್ತೀಕಾರ್ ಆದಿಲ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೇಖಾವಸಂತ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ಎಸ್. ಸುಬ್ರಹ್ಮಣ್ಯ, ಸಚ್ಚಿನ್ ಮೀಗಾ, ಬಿ.ಸಿ.ಗೀತಾ, ಸುಂದರೇಶ್, ನವೀನ್, ಪ.ಪಂ ಸದಸ್ಯರಾದ ಲಕ್ಷ್ಮಣಶೆಟ್ಟಿ, ಸುಕುಮಾರ್, ಅಂಜುಮ್, ಸಮೀರಾ ನಹೀಂ, ಅಬುಬಕರ್, ತರಿಯನ್, ಸೈಯದ್ ಖಲೀಲ್ ಸಾಬ್, ವನಮಾಲಮ್ಮ, ವಸಂತಕುಮಾರ್, ಜುಬೇದ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement