ಸಮಾಜ-ಪೊಲೀಸರ ನಡುವೆ ಉತ್ತಮ ಬಾಂಧವ್ಯ ಅಗತ್ಯ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.2
ಇಂದು ಪೊಲೀಸರನ್ನು ನೋಡುವ ದೃಷ್ಟಿಕೋನ ಸಮಾಜದಲ್ಲಿ ಬದಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಎಸ್. ಕಮಲ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪೊಲೀಸರೆಂದರೆ ಒಂದು ಕಾಲದಲ್ಲಿ ಭಯ ಇತ್ತು. ಆದರೆ, ಇದೀಗ ಸಮಾಜ ನೋಡುವ ದೃಷ್ಟಿಕೋನ ಬದಲಾಗಿದೆ. ಪೊಲೀಸರಿಗೆ ಗೌರವ ಕೊಡಲಾಗುತ್ತಿದೆ. ಆ ಅಭಿಮಾನವನ್ನು ಸಿಬ್ಬಂದಿ ಉತ್ತಮ ಸೇವೆಯ ಮೂಲಕ ಉಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ನಿಕಟ ಸಂಬಂಧ: ನ್ಯಾಯಾಂಗ ಇಲಾಖೆ ಮತ್ತು ಪೊಲೀಸ್ ಇಲಾಖೆ ನಡುವೆ ನಿಕಟ ಸಂಬಂಧವಿದೆ. ಶಾಂತಿಪಾಲನೆ ಮತ್ತು ಕ್ರಿಮಿನಲ್ ಪ್ರಕರಣ ಭೇದಿಸುವಲ್ಲಿ ಪೊಲೀಸರು ಕಾರ್ಯದಕ್ಷತೆ ತೋರುತ್ತಿದ್ದಾರೆ ಎಂದ ಅವರು, ಕಾರ್ಯದಕ್ಷತೆ ಮತ್ತು ನಿಷ್ಠೆಗೆ ಪೊಲೀಸ್ ಇಲಾಖೆ ಪ್ರಖ್ಯಾತಿಯಾಗಿದೆ ಎಂದರು.
ಹಲವು ಪ್ರಕರಣ ಪತ್ತೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುತ್ತಿದ್ದಾರೆ. ಈ ರೀತಿಯ ಸಹಕಾರ ನಿರಂತರವಾಗಿ ನಡೆಯಬೇಕು. ಸಮಾಜ ಮತ್ತು ಇಲಾಖೆ ನಡುವೆ ಉತ್ತಮ ಬಾಂಧವ್ಯ ಇರಬೇಕು. ಇದರಿಂದಾಗಿ ಪೊಲೀಸರ ಬಗ್ಗೆ ಇರುವ ತಪ್ಪು ಕಲ್ಪನೆ ದೂರವಾಗಲಿದೆ. ಆ ಮೂಲಕ ಕರ್ತವ್ಯಕ್ಕೆ ಮನ್ನಣೆ ಸಿಗಲಿದೆ ಎಂದು ತಿಳಿಸಿದರು.
ಅನುಭವವೇ ಆಧಾರ: ಯಾವುದೇ ಒಂದು ಪ್ರಕರಣದ ಬಗ್ಗೆ ಇದೇ ಮಾದರಿಯಲ್ಲಿ ತನಿಖೆ ನಡೆಸುವಂತೆ ಹೇಳಿಕೊಡಲು ಪುಸ್ತಕಗಳಿಲ್ಲ. ಅದು ನಮ್ಮ ಅನುಭವದ ಆಧಾರದ ಮೇಲೆ ತನಿಖೆಯ ದಾರಿ ಸಿಗಲಿದೆ. ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಸದಾಗಿ ಕೆಲಸಕ್ಕೆ ಸೇರ್ಪಡೆಯಾಗುವ ಪೊಲೀಸರಿಗೆ ತನಿಖೆ ನಡೆಸುವ ರೀತಿ ಬಗ್ಗೆ ತಿಳಿಸಿಕೊಡಬೇಕು. ಇದರಿಂದ ಯುವ ಸಿಬ್ಬಂದಿಗಳಿಗಷ್ಟೇ ಅಲ್ಲ, ಸಮಾಜಕ್ಕೂ ಒಳ್ಳೆಯ ಸೇವೆ ಸಲ್ಲಿಸಿದ್ದಂತಾಗುತ್ತದೆ ಎಂದು ಹೇಳಿದರು.
ನಿವೃತ್ತ ಪೊಲೀಸ್ ಅಧಿಕಾರಿ ತಿಮ್ಮರಾಜ್ ಮಾತನಾಡಿ, ಪೊಲೀಸರು ಸೇವೆಯಲ್ಲಿದ್ದಾಗ ಬಹಳ ಸೌಲಭ್ಯ ಸಿಗುತ್ತವೆ. ಆದರೆ, ನಿವೃತ್ತಿಯ ನಂತರ ಯಾವುದೇ ಸೌಲಭ್ಯ ಸಿಗುವುದಿಲ್ಲ. ಆರೋಗ್ಯ ಭಾಗ್ಯ, ಪಡಿತರ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಚಿಕ್ಕಮಗಳೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಪೊಲೀಸ್ ಸಿಬ್ಬಂದಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಪೊಲೀಸರ ಕಲ್ಯಾಣ ನಿಧಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಯ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಹಲವು ತುರ್ತು ಸಂದರ್ಭದಲ್ಲಿ ಹಾಗೂ ವಿವಿಧ ಪ್ರಕರಣಗಳನ್ನು ಭೇದಿಸಲು ಸಹಕರಿಸಿದ ನಾಗರಿಕರನ್ನು ಸನ್ಮಾನಿಸಲಾಯಿತು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಸಂಜೀವ್ ಎಂ. ಪಾಟೀಲ್ ಸ್ವಾಗತಿಸಿದರು. ಚಿಕ್ಕಮಗಳೂರು ನಗರ ವೃತ್ತ ನಿರೀಕ್ಷಕ ರಮೇಶ್ ಕುಮಾರ್ ವಂದಿಸಿದರು.