ಕ್ಷೇತ್ರದಲ್ಲಿ ಸತ್ಯ- ಸುಳ್ಳಿನ ಕಂತೆ ನಡುವೆ ಸ್ಪರ್ಧೆ
ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಸತ್ಯ ಮತ್ತು ಬಿಜೆಪಿಯ ಸುಳ್ಳಿನ ಕಂತೆಯ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ತಾಲೂಕಿನ ಮೂಗ್ತಿಹಳ್ಳಿಯಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಸತ್ಯದ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಮತದಾರ ಕೈಬಿಡುವುದಿಲ್ಲ ಎಂದರು.
ಒತ್ತುವರಿದಾರರು ಮತ್ತು ಅಡಕೆ ಬೆಳೆಗಾರರಿಗೆ ತಪ್ಪು ಮಾಹಿತಿ ನೀಡಿ ಬಿಜೆಪಿ ಸರ್ಕಾರ ಮಾಡಿದ ಮೋಸವನ್ನು ಮರೆಮಾಚಲು ಹೆಣಗಾಡುತ್ತಾ ಈ ಚುನಾವಣೆಯಲ್ಲಿ ಸುಳನ್ನೆ ಬಂಡವಾಳ ಮಾಡಿಕೊಂಡು ನಾಗಾಲೋಟದಲ್ಲಿ ತೆಲುತ್ತಿರುವ ಬಿಜೆಪಿ ನಾಯಕರಿಗೆ ಮತದಾರರು ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದರು.
ನಾನು ಸಂಸದನಾದ ಮೇಲೆ ಕಡೂರು- ಚಿಕ್ಕಮಗಳೂರು ರೈಲು ಸಂಚಾರ ಆರಂಭಕ್ಕೆ ಮತ್ತು ಸಕಲೇಶಪುರ ನೂತನ ರೇಲ್ವೆ ಮಾರ್ಗಕ್ಕೆ ಚಾಲನೆ ಹಾಗೂ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಲು ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಸಹಕಾರದಿಂದ ಸಾಧ್ಯವಾಗಿದೆ. ಜಿಲ್ಲೆಯಲ್ಲಿ ನೀರಾವರಿ ಯೋಜನೆ, ಹೆದ್ದಾರಿಗಳ ಅಭಿವೃದ್ಧಿಗೆ ಕ್ರಮ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳಿಗೆ ಆದ್ಯತೆ ಮೇರೆಗೆ ಪ್ರಾಮಾಣಿಕವಾಗಿ ಶ್ರಮ ವಹಿಸಿ ಜನರಿಗೆ ಸ್ಪಂದಿಸಿದ್ದೇನೆ ಎಂದು ತಿಳಿಸಿದ ಅವರು, ಆಪಾದನೆಯಿಂದ ಕಾಲಹರಣ ಮಾಡೋದು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತಾಡಿ ಎಂದು ಬಿಜೆಪಿಗೆ ತಾಕೀತು ಮಾಡಿದರು.
ಹಕ್ಕುಪತ್ರ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಒತ್ತುವರಿದಾರನ್ನು ಒಕ್ಕಲೆಬ್ಬಿಸುವ ಜತೆ ಮೂರು ವರ್ಷ ಜೈಲು ಎಂಬ ಕಾನೂನು ಮಾಡಿದ್ದು ತಮಗೆ ನೆನಪಿಲ್ಲವೆ ಎಂದು ಅನಂತ್ಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈ ಸಂಬಂಧ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಮಾತನಾಡಿ ಎರಡು ವಿಶೇಷ ಸಭೆ ನಡೆಸಿ ಗ್ರಾಮ ಅರಣ್ಯ ಸಮಿತಿ ಮೂಲಕ ಅರಣ್ಯ ಭೂಮಿಗೆ ಹಕ್ಕುಪತ್ರ ಕೊಡಲು ಯೋಜನೆ ರೂಪಿಸಿದ ಸತ್ಯದ ಬಗ್ಗೆಯೂ ಜನರಿಗೆ ತಿಳಿಸಬೇಕೆಂದು ಹೇಳಿದರು.
ಅಡಕೆ ನಿಷೇಧವಿಲ್ಲ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮುಂದೆ ಅಡಕೆ ನಿಷೇಧ ಕುರಿತಾದ ಯಾವ ಪ್ರಸ್ತಾಪವೂ ಇಲ್ಲದಿದ್ದರೂ ಚುನಾವಣೆಯಲ್ಲಿ ರಾಜಕೀಯಕ್ಕಾಗಿ ಸತ್ಯಕ್ಕೆ ದೂರವಾದ ವಿಷಯ ಬಳಸಿಕೊಳ್ಳುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಲ್ಲೆ ಕೆಜಿಗೆ 1 ಅಕ್ಕಿ ನೀಡುವ ಜತೆ ಹಿಂದುಳಿದವರ ಸಾಲ ಮನ್ನಾ ಘೋಷಣೆ ಮಾಡಿದ ಮರು ಕ್ಷಣವೆ ಬಿಜೆಪಿಯ ಮುಖ ಮುದುಡಿ ಹೋಗಿತ್ತು. ಶಿಕ್ಷಣ, ಆರೋಗ್ಯ, ಕ್ಷೀರಭಾಗ್ಯ ಸೇರಿದಂತೆ ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತಂದರೂ ಬಿಜೆಪಿಗೆ ಅದನ್ನು ತಿರಸ್ಕರಿವುದೇ ಆ ಪಕ್ಷದ ದೊಡ್ಡ ಸಾಧನೆ ಎಂದ ಕಿಡಿಕಾರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಟಿ. ಚಂದ್ರೇಗೌಡ, ಕೆ.ಎಸ್. ಶಾಂತೇಗೌಡ, ಬಿ.ಎಂ. ಸಂದೀಪ್, ಜಿಪಂ ಸದಸ್ಯೆ ಹೇಮಾವತಿ ದೇವೇಗೌಡ, ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ಎ.ಎನ್. ಮಹೇಶ್, ಅತೀಕ್ ಖೈಸರ್, ಶ್ರೀಧರ್ ಉರಾಳ್, ವೆಂಕಟೇಶ್ ನಾಯ್ಡು, ದೇವೇಗೌಡ ಹಾಗೂ ಪಕ್ಷದ ಕಾರ್ಯಕರ್ತರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.