ಸುದ್ದಿ ಸಂಕ್ಷೇಪ
ಜೇಸಿ ಸಂಸ್ಥೆ ಸದಸ್ಯರಿಗೆ ತರಬೇತಿ ಶಿಬಿರ
ನರಸಿಂಹರಾಜಪುರ: ಇಲ್ಲಿನ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಸದಸ್ಯರಿಗೆ ಒಂದು ದಿನದ ಘಟಕ ನಿರ್ವಹಣೆ ತರಬೇತಿ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎಸ್.ಎಸ್. ಗಿರಿ ತರಬೇತಿ ನೀಡುತ್ತ, ಜೇಸಿ ಸಂಸ್ಥೆಯ ಸದಸ್ಯರು ತಮಗೆ ಸಿಕ್ಕಿದ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರ ಜತೆಗೆ ಸಾಮಾಜಿಕ ಕಳಕಳಿ ಹೊಂದಿರಬೇಕು. ಹೊಸದಾಗಿ ಜೇಸಿ ಸಂಸ್ಥೆಗೆ ಸೇರ್ಪಡೆಗೊಂಡ ಸದಸ್ಯರು ಹಿಂಜರಿಕೆ ಮಾಡಿಕೊಳ್ಳದೆ ಜೇಸಿ ಸಂಸ್ಥೆಯ ಎಲ್ಲಾ ಕಾರ್ಯಕ್ರಮ, ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ಅಕ್ಷತ್ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಜೇಸಿ 14ರ ವಲಯದಲ್ಲೇ ನಮ್ಮ ಜೇಸಿ ಸಂಸ್ಥೆಯು ಚಟುಟಿಕೆಗಳಲ್ಲಿ ಮಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ರಕ್ತದಾನ ಶಿಬಿರ, ಟ್ರಕ್ಕಿಂಗ್ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಜೇಸಿ ಸದಸ್ಯರಿಗೆ ಮಾತಿನ ಕೌಶಲ್ಯ ತರಬೇತಿ ಹಮ್ಮಿಕೊಳ್ಳಲಿದ್ದು, ಎಲ್ಲಾ ಸದಸ್ಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಜೇಸಿ ಸಂಸ್ಥೆಯ ಪೂರ್ವಾಧ್ಯಕ್ಷ ಅಭಿನವ ಗಿರಿರಾಜ್, ಕಾರ್ಯದರ್ಶಿ ಸಂತೋಷ್ಕುಮಾರ್, ಉಪಾಧ್ಯಕ್ಷರಾದ ಬಿ.ಟಿ. ವಿಜಯಕುಮಾರ್, ಪುರುಶೋತ್ತಮ್, ನಿರ್ದೇಶಕರಾದ ರಮೇಶ್, ಹರೀಶ್, ಗಿರೀಶ್, ಪ್ರಕಾಶ ಇದ್ದರು.
ಸಂಭ್ರಮದ ಪಲ್ಲಕ್ಕಿ ಉತ್ಸವ
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಿನ ಶ್ರೀಗುರು ನಿರ್ವಾಣಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನಸ್ವಾಮಿ ಪಲ್ಲಕ್ಕಿ ಉತ್ಸವ ಬುಧವಾರ ನೂರಾರು ಜನರ ಶ್ರದ್ಧಾ- ಭಕ್ತಿಯ ಸೇವೆಯೊಂದಿಗೆ ಸಮಾಪನಗೊಂಡಿತು. ಹಸಿರು ವನಸಿರಿಯ ಪಶ್ಚಿಮ ಘಟ್ಟ ಸಾಲಿನ ಪದತಲದಲ್ಲಿರುವ ಕೈಮರದ ಶ್ರೀಗುರು ನಿರ್ವಾಣಸ್ವಾಮಿ ಮಠದಲ್ಲಿ ಬುಧವಾರ ಚೈತ್ರ ತದಿಗೆ ಮಧ್ಯಾಹ್ನ ಕೊಂಬು- ಕಹಳೆ ಮಂಗಳ ವಾದ್ಯದೊಂದಿಗೆ ಅಲಂಕೃತ ಪಲ್ಲಕ್ಕಿ ಉತ್ಸವ ಧರ್ಮದರ್ಶಿ ಎನ್. ಮಹೇಶ್ ನೇತೃತ್ವದಲ್ಲಿ ನಡೆಯಿತು. ಸುತ್ತಮುತ್ತಲ ಗ್ರಾಮಸ್ಥರಲ್ಲದೆ ದೂರದೂರುಗಳಿಂದಲೂ ನಿರ್ವಾಣಸ್ವಾಮಿ ಭಕ್ತ ಒಕ್ಕಲು ಮನೆ ಮಂದಿ ಸಹಿತ ಇಲ್ಲಿಗೆ ಬಂದಿದ್ದು, ಎರಡು- ಮೂರು ದಿನ ಇಲ್ಲೆ ವಾಸ್ತವ್ಯ ಹೂಡಿ ಹರಕೆ- ಭಕ್ತಿ ಸಮರ್ಪಿಸಿದರು. ಶ್ರೀಮಠದ ಎನ್.ಎಂ. ಅಜಯ್, ಜಿಪಂ ಸದಸ್ಯ ಲೋಕೇಶ್, ಬಿಳಿಯಪ್ಪಗೌಡ, ಶಿವಕುಮಾರ್ ಮುಂಚೂಣಿಯಲ್ಲಿದ್ದರು. ಬ್ರಹ್ಮ ರಥೋತ್ಸವ, ಕಳಸ ಪೂಜೆ, ಮಹಾ ರಥೋತ್ಸವ, ಬ್ರಹ್ಮರಥೋತ್ಸವ ಜರುಗಿತು.