ಹೋರಾಟದ ಫಲವಾಗಿ ದೊಡ್ಡಕೆರೆಗೆ ನೀರು: ಗಾಯತ್ರಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಏ. 3
ಬೆಳವಾಡಿ ದೊಡ್ಡ ಕೆರೆಗೆ ನೀರು ಹರಿಸಲು ರಾಜ್ಯ ಸರ್ಕಾರ 10.5 ಕೋಟಿ ಬಿಡುಗಡೆ ಮಾಡಿದ್ದು, ಇದು ವಿವಿಧ ಸಂಘಟನೆಗಳು ಹಾಗೂ ನಮ್ಮ ಹೋರಾಟದ ಫಲ ಎಂದು ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಸ್ಪಷ್ಟಪಡಿಸಿದ್ದಾರೆ.
ಶಾಸಕ ಸಿ.ಟಿ. ರವಿ ಅವರು ಒಳ್ಳೆಯ ಅಭಿವೃದ್ಧಿ ಕೆಲಸವಾಗುತ್ತಿರುವುದನ್ನು ಸಹಿಸದೆ ಇದರಲ್ಲಿ ರಾಜಕೀಯ ಮಾಡುತ್ತಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಆರೋಪಿಸಿದರು.
ಸಚಿವ ಶಿವರಾಜ್ ತಂಗಡಗಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಶಾಸಕರು ಜನಪ್ರತಿನಿಧಿಯಾಗಿ ಬರಲಿಲ್ಲ, ಸಾರ್ವಜನಿಕರ ಸಭೆಗೂ ಬರಲಿಲ್ಲ ಎಂದು ದೂರಿದರು.
ಕಳೆದ 2 ವರ್ಷಗಳಿಂದ ಈ ಕಾಮಗಾರಿ ಸ್ಥಗಿತವಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಚಿವ ತಂಗಡಗಿ ಬಳಿ ವಿಷಯ ಪ್ರಸ್ತಾಪಿಸಿದರ ಫಲವಾಗಿ ಹಣ ಬಿಡುಗಡೆಯಾಗಿದೆ ಎಂದು ಹೇಳಿದರು.
ಸ್ಥಳ ಪರಿಶೀಲಿಸಿದ ಸಚಿವರಿಗೆ ಅಧಿಕಾರಿಗಳು 480 ಲಕ್ಷ ಅಗತ್ಯ ಇದೆ ಎಂದು ಲಿಖಿತವಾಗಿ ಸಲ್ಲಿಸಿದ ಪರಿಣಾಮ ಹಣ ಮಂಜೂರಾಗಿದೆ. ಮಳಲೂರು ಪಿಕಪ್ 0.20 ಕಿ.ಮಿ.ಯಿಂದ 5.80 ಕಿ.ಮೀ.ವರೆಗೆ ಲೈನಿಂಗ್ ಕಾಂಕ್ರೀಟ್ ಮಾಡಲು ಸಂಬಂಧಿಸಿದ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಲಾಗಿತ್ತು ಎಂದು ತಿಳಿಸಿದರು.
ಇನ್ನು 11.70 ಕಿ.ಮೀ. ಲೈನಿಂಗ್ ಕಾಂಕ್ರಿಟ್ ಕಾಮಗಾರಿ ಬಾಕಿ ಉಳಿದುಕೊಂಡಿದೆ ಎಂದ ಅವರು, ಈ ಹಣ ಬಿಡುಗಡೆ ಮಾಡಲಾಗಿದೆ.
ಹಿಂದೆ ಇವರದೇ ಸರ್ಕಾರ ಇದ್ದಾಗ ಸದರಿ ಯೋಜನೆಯನ್ನು ಏಕೆ ಪೂರ್ಣಗೊಳಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಜನರ, ರೈತರ, ಬಡವರ ಪರ ಎಂದು ಹೇಳುತ್ತಿರುವ ಶಾಸಕರು ವರ್ಕ್ ಸ್ಲಿಪ್ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕಾಮಗಾರಿ ವೇಗ ಹೆಚ್ಚಿಸಿ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಬೃಹತ್ ಯೋಜನೆ: 2008-09ನೇ ಸಾಲಿನಲ್ಲಿ ಮಂಜೂರಾತಿ ದೊರೆತ ಈ ಯೋಜನೆಯ ಕಾಮಗಾರಿ ಭೂ ಸ್ವಾಧೀನ ಆಗದ ಕಾರಣ ಸ್ಥಗಿತಗೊಂಡಿತ್ತು. ಕಳಸಾಪುರ ಕೆರೆ, ತಿಮ್ಮಪ್ಪನಾಯಕನ ಕೆರೆ, ಈಶ್ವರಹಳ್ಳಿ ಕೆರೆ, ಬೆಳವಾಡಿ ದೊಡ್ಡ ಕೆರೆಗೆ ನೀರು ಹರಿಸುವ ಬೃಹತ್ ಯೋಜನೆ ಇದಾಗಿದೆ ಎಂದರು.
ಕಳಸಾಪುರ- ಬೆಳವಾಡಿ ಭಾಗದ 500ಕ್ಕೂ ಹೆಚ್ಚು ಜನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಿದಾಗ ಸಂಪುಟದಲ್ಲಿ ಮಂಜೂರಾತಿ ದೊರಕಿ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಮಾಡುತ್ತಿರುವ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.