ಪವಿತ್ರ ಮತದಾನ ಎಲ್ಲರ ಜವಾಬ್ದಾರಿ: ತಿಪ್ಪೇರುದ್ರಪ್ಪ
ಚಿಕ್ಕಮಗಳೂರು: ಮತದಾನ ಪವಿತ್ರ ಕಾರ್ಯ, ನಾಗರಿಕರು ಇದನ್ನು ಒಂದು ಪೂಜ್ಯ ಭಾವನೆಯಿಂದ ಪರಿಗಣಿಸಿ ಮತದಾನ ಮಾಡುವುದು ಎಲ್ಲರ ಜವಾಬ್ದಾರಿಯಾಗಬೇಕೆಂದು ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಹೇಳಿದ್ದಾರೆ.
ನಗರದ ಎಂಎಲ್ವಿ ರೋಟರಿ ಸಭಾಂಗಣದಲ್ಲಿ ರೋಟರಿ ಸಂಸ್ಥೆಯ ಸದಸ್ಯರಿಗೆ ಗುರುವಾರ ಸಂಜೆ ಏರ್ಪಡಿಸಿದ್ದ ಮತದಾನದ ಮಹತ್ವ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರೇತರ ಸಂಸ್ಥೆಯಾಗಿರುವ ರೋಟರಿಯ ಸದಸ್ಯರಾಗಿರುವ ಪ್ರತಿಯೊಬ್ಬರು ಪ್ರಭಾವಿ ವರ್ಚಸ್ಸು ಹೊಂದಿದ್ದು, ಇದನ್ನು ಬಳಸಿಕೊಂಡು ಮತದಾರ ಮೇಲೆ ಪ್ರಭಾವ ಬೀರಿ ಮತದಾನ ಮಾಡಲು ಪ್ರೇರೇಪಿಸುವಂತೆ ಕರೆ ನೀಡಿದರು. ಮೌಲ್ಯಗಳು ಕಣ್ಮರೆಯಾಗುತ್ತಿವೆ. ದೇಶಭಕ್ತಿ ಹಿನ್ನೆಲೆಯಲ್ಲಿ ರಾಷ್ಟ್ರಕಟ್ಟುವ ನಿಟ್ಟಿನ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಸ್ವೀಪ್ ಸಮಿತಿ ಮೂಲಕ ಜನರಲ್ಲಿ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸುತ್ತಿದೆ ಎಂದು ಹೇಳಿದರು.
ರೋಟರಿ ಸದಸ್ಯರಿಂದ ಚುನಾವಣೆಗೆ ಸಂಬಂಧಿಸಿದ ಪ್ರಶ್ನೋತ್ತರಗಳು ಹಾಗೂ ಸ್ವೀಪ್ ಸಮಿತಿ ವತಿಯಿಂದ ಪ್ರತಿಜ್ಞಾ ವಿಧಿಗೆ ಸಹಿ ಪಡೆಯಲಾಯಿತು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ರಘು ಹಾಗೂ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ನೀತಿ ಸಂಹಿತೆ: ಸಶಸ್ತ್ರಗಳ ಡಿಪಾಸಿಟ್ಗೆ ವಿನಾಯಿತಿ
ಚಿಕ್ಕಮಗಳೂರು: ಚುನಾವಣೆಯ ಸಂಬಂಧ ಸಾರ್ವಜನಿಕ ಶಾಂತಿ ಶಿಸ್ತು ಕಾಪಾಡುವ ದೃಷ್ಟಿಯಿಂದ ಸಶಸ್ತ್ರಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣಾ ವಶಕ್ಕೆ ಪಡೆಯಲು ಈ ಹಿಂದೆ ಅಧಿಸೂಚನೆ ಹೊರಡಿಸಲಾಗಿತ್ತು.
ಬ್ಯಾಂಕ್ನ ದೈನಂದಿನ ಹಣಕಾಸಿನ ಕಾರ್ಯಚಟುವಟಿಕೆಯ ಅನುಕೂಲಕ್ಕೆ ಹಾಗೂ ದೇವಸ್ಥಾನಗಳಲ್ಲಿ ಆಭರಣಗಳು ಇರುವುದರಿಂದ ಇವುಗಳ ಭದ್ರತೆಗೆ ಪೊಲೀಸ್ ಠಾಣೆಯಲ್ಲಿ ಸಶಸ್ತ್ರಗಳನ್ನು ಡಿಪಾಸಿಟ್ನಿಂದ ವಿನಾಯಿತಿ ಕೋರಿದ ಹಿನ್ನೆಲೆ ಭದ್ರತೆಗಾಗಿ ಸಶಸ್ತ್ರಗಳ ಅನಿವಾರ್ಯತೆ ಇರುವುದರಿಂದ ಎಲ್ಲಾ ಸರ್ಕಾರಿ/ಅರೆ ಸರ್ಕಾರಿ, ಬ್ಯಾಂಕುಗಳು, ಎ.ಟಿ.ಎಂ.ಗಳು, ಧಾರ್ಮಿಕ ಸಂಸ್ಥೆಗಳಲ್ಲಿ ಭದ್ರತೆಗಾಗಿ ಸಶಸ್ತ್ರ ಹೊಂದಿರುವ ಪರವಾನಗಿದಾರರಿಗೆ ಸಶಸ್ತ್ರ ಡಿಪಾಸಿಟ್ಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.