'ಪುರಾತನ ಘಟನೆಗಳೇ ಆಧುನಿಕ ಸಂಶೋಧನೆ'
ಚಿಕ್ಕಮಗಳೂರು: ನಗರದ ಎಐಟಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ ಹಾಗೂ ಐಇಇಇ ವತಿಯಿಂದ ಶುಕ್ರವಾರ ರಾಜ್ಯಮಟ್ಟದ ತಾಂತ್ರಿಕ ವಿಷಯ ಮಂಡನೆ ಮತ್ತು ತಾಂತ್ರಿಕ ಉತ್ಸವ ನಡೆಯಿತು.
ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ. ಪಿ.ಸಿ. ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುರಾತನ ಕಾಲದ ಘಟನೆಗಳೇ ಈ ಆಧುನಿಕ ಯುಗದಲ್ಲಿ ನೂತನ ಸಂಶೋಧನೆಗಳಾಗಿ ಹೊರಹೊಮ್ಮುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ವಿದ್ಯಾರ್ಥಿಗಳ ಕ್ರಿಯಾಶೀಲತೆ ಹಾಗೂ ನಿರ್ವಹಣೆಯನ್ನು ಪ್ರಶಂಸಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಪಿ. ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶಿಸಲು ಪೂರಕ ವೇದಿಕೆ ಇದಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಾದ ಮಹಮದ್ ಜಿಶಾನ್ ಮತ್ತು ಗೌತಮಿ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಲ್. ಬೃಂದಾ ವರದಿ ಓದಿದರು. ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಶುಕ್ರವಾರ ನಡೆದ ತಾಂತ್ರಿಕ ವಿಷಯ ಮಂಡನೆ ಕಾರ್ಯಕ್ರಮವನ್ನು ಡಾ. ಪಿ.ಸಿ. ಶ್ರೀಕಾಂತ್ ಉದ್ಘಾಟಿಸಿದರು.