ಪ್ರಜಾಪ್ರಭುತ್ವಕ್ಕೆ ಮತದಾನವೇ ತಳಹದಿ: ಬಿಇಒ
ತರೀಕೆರೆ: ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ಭವ್ಯ ಭಾರತ ನಿರ್ಮಾಣದಲ್ಲಿ ಯುವಕರು ಮುಂದಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್ ತಿಳಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಸ್ವೀಪ್(ವ್ಯವಸ್ಥಿತ ಮತದಾನ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ) ಸಮಿತಿ, ಪ್ರಥಮ ದರ್ಜೆ ಕಾಲೇಜು ರಾಜ್ಯ ಶಾಸ್ತ್ರ ವಿಭಾಗ ವತಿಯಿಂದ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಾಡಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಪ್ರಯುಕ್ತ ನಡೆದ ಸಂವಾದದಲ್ಲಿ ಮಾತನಾಡಿದರು.
ಭಾರತದಲ್ಲಿ ಈ ಬಾರಿ ಯುವ ಮತದಾರರ ಸಂಖ್ಯೆ ಶೇ. 40 ರಷ್ಟಿದ್ದು, ಸರ್ಕಾರವನ್ನು ನಿರ್ಧರಿಸುವ ಅತ್ಯುತ್ತಮ ಅವಕಾಶ ಯುವಕರಿಗೆ ದೊರೆತಿದೆ. ಯುವ ಜನತೆ ಜಾತಿ, ಮತ, ಧರ್ಮ ಹಾಗೂ ಯಾವುದೇ ಆಮಿಷಕ್ಕೆ ಒಳಗಾಗದೆ ಸ್ವಯಂಪ್ರೇರಿತರಾಗಿ ಮತದಾನ ಮಾಡುವ ಜತೆಯಲ್ಲಿ ಇತರರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಬಲಾಢ್ಯ ರಾಷ್ಟ್ರ: ಭಾರತ ಯುವಕರ ದೇಶವಾಗಿ ಪರಿವರ್ತನೆ ಆಗುತ್ತಿದ್ದು, ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಯುವಶಕ್ತಿ ಹೊಂದಿದ ಬಲಾಢ್ಯ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ ಎಂದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ದೇವರಾಜಪ್ಪ ಮಾತನಾಡಿ, ಸಂಸತ್ತು ರಚನೆಯಲ್ಲಿ ಮತದಾರರೇ ಪ್ರಭುಗಳು. ಸಂಸತ್ತಿನ ಕಾನೂನು ರಚನೆಯಲ್ಲಿ ಮತದಾರರ ಪಾತ್ರ ಅಮೂಲ್ಯ. ಹಾಗಾಗಿ ಕಡ್ಡಾಯ ಮತದಾನ ಮಾಡಲು ಮುಂದಾಗಬೇಕು. ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡದೆ ಇರುವವರು ಸೇರ್ಪಡೆ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಸ್ವೀಪ್ ಅಧಿಕಾರಿ ಚಂದ್ರಶೇಖರ್ ಮಾತನಾಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಪ್ರಾಚಾರ್ಯ ಡಾ. ವಿಶ್ವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಶ್ರೀಧರ್, ತಿಮ್ಮಯ್ಯ ಉಪನ್ಯಾಸಕರಾದ ಪಂಕಜ, ಶಿವಮೂರ್ತಿ, ಡಾ. ಜಗದೀಶ್, ಮತ್ತಿತರರು ಭಾಗವಹಿಸಿದ್ದರು.