ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆಯೋಗದ ನಿರ್ದೇಶನ ಪಾಲಿಸಿ

Rashmi Kasaragodu
Updated On : 7 Apr 2014, 11:12 am

ಕ.ಪ್ರ.ವಾರ್ತೆ    ಚಿಕ್ಕಮಗಳೂರು    ಏ. 6
ಚುನಾವಣಾ ಆಯೋಗದ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಮೈಕ್ರೋ ಅಬ್ಸರ್‌ವರ್‌ಗಳಿಗೆ ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ನೇಮಕಗೊಂಡಿರುವ ಮೈಕ್ರೋ ಅಬ್ಸರ್‌ವರ್‌ಗಳಿಗೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗವು ಪ್ರತಿ ಚುನಾವಣೆಯಲ್ಲಿಯೂ ಹೊಸ ಹೊಸ ನಿರ್ದೇಶನ ನೀಡುತ್ತಾ ಬರುತ್ತಿದೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಯಾವುದೇ ರೀತಿಯ ಲೋಪಕ್ಕೆ ಅವಕಾಶವಿರುವುದಿಲ್ಲ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಂಶಯ ಅಥವಾ ಮಾರ್ಗದರ್ಶನದ ಅಗತ್ಯ ಕಂಡುಬಂದಲ್ಲಿ ಈ ತರಬೇತಿಯಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಸೆಕ್ಟರಲ್ ಮ್ಯಾಜಿಸ್ಟ್ರೇಟ್ ಅಥವಾ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ಎಂದರು.
ಮತದಾನದ ದಿನ ಪ್ರಕ್ರಿಯೆ ಪ್ರಾರಂಭಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ಮತದಾನ ಕೇಂದ್ರದಲ್ಲಿ ಹಾಜರಿರುವುದರೊಂದಿಗೆ ಮತದಾನ ಕೇಂದ್ರದಲ್ಲಿ ಅಣಕು ಮತದಾನ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು.
ಎಚ್ಚರ ವಹಿಸಿ: ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಕೇಂದ್ರದಲ್ಲಿ ನಡೆಯುವ ಎಲ್ಲಾ ಪ್ರಮುಖ ಘಟನೆಗಳನ್ನು ಚುನಾವಣಾ ಆಯೋಗವು ನೀಡಿರುವ ನಿಗದಿತ ನಮೂನೆಯಲ್ಲಿ ನಮೂದು ಮಾಡಿಕೊಳ್ಳುವಂತೆ ಹಾಗೂ ಮತದಾನವು ಗೌಪ್ಯತೆಯಿಂದ ನಡೆಯುತ್ತಿರುವ ಬಗ್ಗೆ ಎಚ್ಚರ ವಹಿಸಬೇಕೆಂದರು.
ಚುನಾವಣಾ ಕಾರ್ಯದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಹಾಗೂ ನಿಮ್ಮ ಮೇಲೆ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಲೀಂ ಪಾಷಾ ಹಾಗೂ ಆರ್. ಬಿ. ಕರೇಗೌಡ ಅವರು ಚುನಾವಣಾ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಸಹಾಯಕ ಚುನಾವಣಾಧಿಕಾರಿಗಳಾದ ಅನುರಾಧ, ಕೆ. ಚನ್ನಬಸಪ್ಪ, ರಾಜಗೋಪಾಲ್, ಜಿ.ಎಸ್. ವಿಠಲ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement