'ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಸಲ್ಲ'
ಚಿಕ್ಕಮಗಳೂರು: ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ವಿರೋಧಿಗಳು ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ಅಪಪ್ರಚಾರಕ್ಕೆ ಮತದಾರ ಮನ್ನಣೆ ನೀಡುವುದಿಲ್ಲ ಎಂದು ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಪರ ನಗರದಲ್ಲಿ ಶನಿವಾರ ಮತಯಾಚನೆ ಮಾಡಿದ ವೇಳೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ, ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಭ್ರಷ್ಟಾಚಾರ ಜನರಲ್ಲಿ ಇನ್ನೂ ಮಾಸಿಲ್ಲ. ಬಿಜೆಪಿ ಮಾಡಿದ ಆಡಳಿತ ಕಣ್ಮುಂದೆಯೇ ಇದೆ. ಅವರ ಅಧಿಕಾರವಧಿಯಲ್ಲಿ ಮಾಡಿದ ಹಗರಣಗಳು ರಾಜಕಾರಣದಲ್ಲಿರುವವರೆಗೂ ನಿತ್ಯ ಕೋರ್ಟ್‌ನಲ್ಲಿ ಕಾಲ ಕಳೆಯುವಷ್ಟಿದೆ. ಹಾಗಿದ್ದ ಮೇಲೆ ಸಾರ್ವಜನಿಕ ಸೇವೆಗೆ ಅವಕಾಶ ಇನ್ನೆಲ್ಲಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಕಾರ್ಯಕ್ರಮ ಮತ್ತು ಸಿಎಂ ಸಿದ್ದರಾಮಯ್ಯನವರ ಜನಪರ ಯೋಜನೆಗಳು ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ಸಂಘಟನೆ ಜನರ ವಿಶ್ವಾಸ ಗಳಿಸಿದ್ದು, ರಾಜ್ಯದಲ್ಲಿ ಜನ ಕೈಬಿಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ನಗರಭೆ ಸದಸ್ಯ ತೇಜ್‌ಕುಮಾರ್, ಬಿ.ಎಂ. ಸಂದೀಪ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಕ್ಬರ್, ಶ್ರೀಧರ್ ಉರಾಳ್, ಮಧುಕುಮಾರ್, ಇಲ್ಯಾಜ್, ಮನ್ಸೂರ್, ಸಲೀಮ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಕಾಂಗ್ರೆಸ್ ಕಾರ್ಯಕರ್ತರಿಂದ ಬೈಕ್ ಜಾಥಾ
ಮೂಡಿಗೆರೆ: ತಾಲೂಕಿನ ಕಳಸ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾ ಮುಖಾಂತರ ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಪ್ರಚಾರ ಕೈಗೊಂಡರು. ಕಳಸದ ಗಂಗನಕುಡಿಗೆಯಿಂದ ನೂರಾರು ಬೈಕ್‌ಗಳ ಮುಖಾಂತರ ಪ್ರಾರಂಭಗೊಂಡ ರೋಡ್ ಶೋ ಕಳಸ ಪಟ್ಟಣ, ಕೋಟೆಹೊಳೆಯಲ್ಲಿ ಸಾಗಿ ಪಟ್ಟಣದಲ್ಲಿರುವ ಕಾಂಗ್ರೆಸ್ ಕಚೇರಿಗೆ ತಲುಪಿತು. ಕಾಂಗ್ರಸ್ ಮುಖಂಡರಾದ ಬ್ರಹ್ಮದೇವ, ಅನಿಲ್ ಡಿ ಸೋಜಾ, ರವಿರೈ, ಶಾಹುಲ್ ಹಮೀದ್, ವಿಜಯಕುಮಾರ್, ವಿರೇಂದ್ರ, ಸುದರ್ಶನ್, ಸಂತೋಷ್, ರಾಘವೇಂದ್ರ, ಪದ್ಮಪ್ರಸಾದ್ ಮುಂತಾದವರು ಇದ್ದರು.