ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿಪಡಿಸಿ
ತರೀಕೆರೆಯ ರೈಲು ನಿಲ್ದಾಣದ ಬಳಿ ಇರುವ ಪುರಸಭೆ ಆಶ್ರಯದ ಹಳೇ ಖಾಸಗಿ ಬಸ್ ನಿಲ್ದಾಣ ಪಟ್ಟಣದ ಹೃದಯ ಭಾಗದಲ್ಲಿದ್ದು, ತರೀಕೆರೆ ಕುರಿತು ಅಕ್ಕ- ಪಕ್ಕದ ಊರುಗಳಿಂದ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ಬಂದು ಹೋಗುವ ಪ್ರಯಾಣಿಕರ ದೃಷ್ಟಿಯಿಂದ ಅತ್ಯಂತ ಪ್ರಮುಖ ಬಸ್ ನಿಲ್ದಾಣವಾಗಿದೆ.
ಈ ಹಳೇ ಬಸ್ ನಿಲ್ದಾಣದಲ್ಲಿ ಈ ಹಿಂದೆ ಪುರಸಭೆಯ ವಾಣಿಜ್ಯ ಮಳಿಗೆಗಳಲ್ಲಿ ಅಂಗಡಿ- ಮುಂಗಟ್ಟು, ಹೋಟೆಲ್ ಇದ್ದುದರಿಂದ ಪುರಸಭೆ ಖಜಾನೆಗೆ ಪ್ರತಿನಿತ್ಯ ಒಳ್ಳೆಯ ಆದಾಯ ಕೂಡ ಬರುತ್ತಿತ್ತು. ಆದರೆ, ಇದೀಗ ಬಸ್ ನಿಲ್ದಾಣದಲ್ಲಿದ್ದ ವಾಣಿಜ್ಯ ಮಳಿಗೆಗಳು ಕುಸಿದು ಬಿದ್ದಿದೆ. ಅಲ್ಲಿ ಹಿಂದೆ ಇದ್ದ ಬಸ್ ನಿಲ್ದಾಣ ಹೋಟೆಲ್ ಕೂಡ ಇಲ್ಲ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಸುತ್ತ ಸರ್ಕಲ್ ಕೂಡ ಇತ್ತು. ಇದರಿಂದಾಗಿ ಬಸ್ಸುಗಳು ಪ್ರತ್ಯೇಕವಾಗಿ ನಿಲ್ದಾಣದ ಒಳಗೆ ಮತ್ತು ಹೊರಗೆ ಹೋಗಲು ಅನುಕೂಲವಾಗುತ್ತಿತ್ತು. ಇದೀಗ ಸರ್ಕಲ್ ಮತ್ತು ನಿಲ್ದಾಣ ಒಂದೇ ಆಗಿದೆ.
ಹೊರಗಡೆಯಿಂದ ಬರುವ ಪ್ರಯಾಣಿಕರ ಬಸ್ಸುಗಳು ನಿಲ್ದಾಣದೊಳಕ್ಕೆ ಸುಲಭವಾಗಿ ಪ್ರವೇಶಿಸುವಂತಿಲ್ಲ. ಇದೀಗ ನಿಲ್ದಾಣದೊಳಕ್ಕೆ ಬಂದು ಹೋಗುವ ಬಸ್ಸುಗಳ ಸಂಖ್ಯೆ ಮತ್ತು ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ನಿಲ್ದಾಣದೊಳಗಿನ ರಸ್ತೆಯೂ ಹಾಳಾಗಿದೆ. ಇದರಿಂದ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ.
ಸ್ಥಳೀಯ ಪುರಸಭೆ ಕ್ರಮ ಕೈಗೊಂಡು ಹಳೇ ಖಾಸಗಿ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕು.
- ವಿನಾಯಕ, ತರೀಕೆರೆ
ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ
ಚಿಕ್ಕಮಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಅಧಿಕವಾಗುತ್ತಿದೆ. ಕೆಲವು ಆಟೋಗಳು ಸೇರಿದಂತೆ ಕೆಎಸ್ಸಾರ್ಟಿಸಿ ಬಸ್‌ಗಳಿಂದ ಬರುತ್ತಿರುವ ಕಪ್ಪನೆಯ ಹೊಗೆಯಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ.
ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಆಟೋಗಳು ರಾಜಾರೋಷವಾಗಿ ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನು ಕೆಎಸ್ಸಾರ್ಟಿಸಿ ಬಸ್‌ಗಳ ಬಗ್ಗೆ ಸಂಸ್ಥೆಯವರು ಗಮನ ಹರಿಸುತ್ತಿಲ್ಲ. ಕಪ್ಪನೆ ಹೊಗೆ ಹೊರ ಹಾಕುತ್ತಿರುವ ವಾಹನಗಳ ಹಿಂದೆ ಚಲಿಸುವ ಇತರೆ ವಾಹನಗಳ ಚಾಲಕರಿಗೆ ಕಿರಿಕಿರಿಯಾಗುತ್ತಿದೆ.
ವಾಯುಮಾಲಿನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಒಂದು ಇಲಾಖೆಯನ್ನೇ ಹುಟ್ಟು ಹಾಕಿದೆ. ಆದರೆ, ಸರ್ಕಾರಿ ಸ್ವಾಮ್ಯದ ಕೆಎಸ್ಸಾರ್ಟಿಸಿ ಬಸ್‌ಗಳಿಂದ ಕಪ್ಪನೆ ಹೊಗೆ ಬರುತ್ತಿರುವ ಬಗ್ಗೆ ಸಂಸ್ಥೆಯವರಾಗಲಿ, ಸಂಬಂಧಪಟ್ಟ ಇಲಾಖೆಯಾಗಲೀ ಗಮನ ಹರಿಸದೆ ಇರುವುದು ದುರ್ದೈವದ ಸಂಗತಿ. ಕೆಎಸ್ಸಾರ್ಟಿಸಿಯವರು ತಮ್ಮ ಬಸ್‌ಗಳನ್ನು ತಪಾಸಣೆಗೆ ಒಳಪಡಿಸಿ ವಾಯುಮಾಲಿನ್ಯ ತಡೆಗಟ್ಟಬೇಕು. ವಾಯುಮಾಲಿನ್ಯ ನಿಯಂತ್ರಣ ಮಂಡಳಿಯವರು ಕಪ್ಪನೆ ಹೊಗೆ ಹೊರ ಹಾಕುವ ಇತರೆ ವಾಹನಗಳ ಮೇಲೆ ನಿಗಾ ಇಟ್ಟು ಸೂಕ್ತ ಕ್ರಮ ವಹಿಸಲಿ.
- ಸೋಮಶೇಖರ್, ಚಿಕ್ಕಮಗಳೂರು
ರೋಗ ತಡೆಗೆ ಮುಂಜಾಗ್ರತೆ ಅಗತ್ಯ
ತರೀಕೆರೆ ಪಟ್ಟಣದಲ್ಲಿ ಈ ಸಾರಿ ಮಾರ್ಚಿ ತಿಂಗಳಿನ ಪ್ರಾರಂಭದ ದಿನಗಳಿಂದಲೇ ಬಿಸಿಲಿನ ತಾಪ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ವಾತಾವರಣದ ಏರುಪೇರಿನಿಂದಾಗಿ ಕಾಯಿಲೆ ರೋಗ ರುಜಿನಗಳು ಬೇಸಿಗೆ ಕಾಲದಲ್ಲಿ ಬೇಗ ಬೇಗ ಹರಡುವುದು ಸಹಜ.
ತನ್ನಂತೆ ತಾನೆ ಉತ್ಪತ್ತಿಯಾಗುವ ಸೊಳ್ಳೆ, ಕ್ರಿಮಿ ಕೀಟಗಳು ಹುಳು ಹುಪ್ಪಟೆಗಳ ಹಾವಳಿಯೂ ಈ ಸಮಯದಲ್ಲಿ ಹೆಚ್ಚಾಗಿರುತ್ತದೆ. ಹಾಗಾಗಿ ಆರೋಗ್ಯ ಮತ್ತು ಸುತ್ತಮುತ್ತಲ ಉತ್ತಮ ಪರಿಸರ ಕಾಪಾಡಿಕೊಳ್ಳುವ ವಿಚಾರದಲ್ಲಿ ಎಂದಿಗಿಂತಲೂ ಹೆಚ್ಚು ಕಾಳಜಿ ವಹಿಸಬೇಕು.
ಸ್ಥಳೀಯ ಪುರಸಭೆ ಪಟ್ಟಣದಲ್ಲಿ ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಡಬೇಕು, ಸಾರ್ವಜನಿಕ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ ಸಿಬ್ಬಂದಿಯೊಡನೆ ಸಮನ್ವಯತೆಯಿಂದ ಪಟ್ಟಣದ ಎಲ್ಲ ಬಡಾವಣೆಗಳಲ್ಲಿ, ಮುಖ್ಯ ರಸ್ತೆ, ಸಂಪರ್ಕ ರಸ್ತೆ ಹಾಗೂ ಕನ್ಸರ್‌ವೆನ್ಸಿಗಳಲ್ಲಿ ಸೊಳ್ಳೆ ಮತ್ತಿತರರ ರೋಗ ಹರಡುವ ಕ್ರಿಮಿ ಕೀಟಗಳ ನಿಯಂತ್ರಣಕ್ಕೆ ಫಾಗಿಂಗ್, ಡಿಡಿಟಿ ಸ್ಪ್ರೇ , ಪೆನಾಯಿಲ್ ಹಾಕಿ ಶುದ್ದ ಪಡಿಸುವಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ಪಟ್ಟಣದ ಎಲ್ಲ ಕಡೆ ನಿರ್ವಹಿಸುವತ್ತ ಆದ್ಯ ಗಮನ ಕೊಡಬೇಕು. ಅದಕ್ಕಾಗಿ ಉತ್ತಮ ಪರಿಸರ, ಶುದ್ದ ಕುಡಿಯುವ ನೀರು ತಾಜಾ ತರಕಾರಿ ಹಣ್ಣು ಹಂಪಲು ಬಳಸುವಲ್ಲಿ, ಸಾರ್ವತ್ರಿಕವಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸುವುದು ಪುರಜನರ ಆರೋಗ್ಯ ಕಾಪಾಡುವಲ್ಲಿ ಶುದ್ದ ಕುಡಿಯುವ ನೀರು ಸರಬರಾಜು, ಉತ್ತಮ ಪರಿಸರ ನಿರ್ಮಾಣದತ್ತ ಆದ್ಯ ಗಮನ ಹರಿಸುವುದು ಅತಿ
ಮುಖ್ಯವಾಗಿದೆ.
- ನಾಗರಾಜ್, ತರೀಕೆರೆ